ಪ್ರೀತಿಸಿದ ಯುವತಿ ಆತ್ಮಹತ್ಯೆ | ದುಡುಕಿನ ನಿರ್ಧಾರ ತೆಗೆದುಕೊಂಡ ಪ್ರಿಯಕರ
ಹೈದರಾಬಾದ್: ಪ್ರೀತಿಸಿದ ಯುವತಿಯನ್ನು ಬಿಟ್ಟಿರಲು ಸಾಧ್ಯವಾಗದ ಯುವಕನೋರ್ವ ತನ್ನ ತಾಯಿಗೆ ಸೆಲ್ಫಿ ವಿಡಿಯೋ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದುಬೈನಲ್ಲಿ ನಡೆದಿದೆ.
24 ವರ್ಷದ ಮನಲಾ ರಾಜೇಶ್ ತೆಲಂಗಾಣದ ಜಗಿತ್ತಲ ಜಿಲ್ಲೆಯ ಗೊಲ್ಲಪೆಲ್ಲಿ ಮಂಡಲದ ಲಕ್ಷ್ಮೀಪುರ ಗ್ರಾಮದ ನಿವಾಸಿಯಾಗಿದ್ದಾರೆ. ಇವರು ಕಳೆದ ನಾಲ್ಕು ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದರು. ಯುವತಿ ಕೂಡ ರಾಜೇಶ್ ಅವರನ್ನು ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದರು.
ರಾಜೇಶ್ ಕೆಲಸಕ್ಕಾಗಿ ದುಬೈಗೆ ಬಂದಿದ್ದರು. ದುಬೈನಿಂದ ಬಂದ ಬಳಿಕ ಮದುವೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಅವರು ದುಬೈಗೆ ತೆರಳಿದ್ದರು. ಈ ನಡುವೆ ಮಗಳ ಪ್ರೀತಿಯ ವಿಚಾರ ಪೋಷಕರಿಗೆ ತಿಳಿದಿದೆ. ಮಗಳ ಪ್ರೀತಿಗೆ ಒಪ್ಪದ ಪೋಷಕರು, ಆಕೆಗೆ ಬೇರೊಬ್ಬನ ಜೊತೆಗೆ ವಿವಾಹ ಮಾಡಲು ನಿರ್ಧರಿಸಿದ್ದಾರೆ.
ಪೋಷಕರ ವಿಕೃತ ನಿರ್ಧಾರದಿಂದ ಯುವತಿ ಬೇಸತ್ತು ಹೋಗಿದ್ದಾಳೆ. ಇಷ್ಟವಿಲ್ಲದ ಮದುವೆಗಿಂತ ಸಾವೇ ಮೇಲು ಅಂದುಕೊಂಡ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇತ್ತ ದುಬೈನಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಗೆ ಈ ವಿಚಾರ ತಿಳಿದಿದ್ದು, ಆತ ತನ್ನ ತಾಯಿಗೆ ವಿಡಿಯೋ ಸಂದೇಶ ಕಳುಹಿಸಿದ್ದು, ಪ್ರೀತಿಸಿದವಳನ್ನು ಬಿಟ್ಟು ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ, ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.