ಕೆಂಪು ಕೋಟೆಯ ಮೇಲೆ ರೈತರ ಬಾವುಟ ಹಾರಿಸಿದ್ದು ಬಿಜೆಪಿ ಕಾರ್ಯಕರ್ತ!
ದೆಹಲಿ: ನಿನ್ನೆ ರೈತರು ಕೆಂಪು ಕೋಟೆಯ ಮೇಲೆ ರೈತರ ಬಾವುಟ ಹಾರಿಸುವ ಮೂಲಕ ವಿಶ್ವದಲ್ಲಿಯೇ ಸುದ್ದಿಯಾಗಿದ್ದರು. ಆದರೆ ಇದೀಗ ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದ ವ್ಯಕ್ತಿ ರೈತ ಅಲ್ಲ, ಬಿಜೆಪಿ ಕಾರ್ಯಕರ್ತ ಎನ್ನುವುದು ಬಯಲಾಗಿದೆ.
ರೈತರ ಹೋರಾಟವನ್ನು ದಿಕ್ಕು ತಪ್ಪಿಸಲು ಹೋರಾಟದೊಳಗೆ ನುಸುಳಿದ್ದ ಬಿಜೆಪಿ ಕಾರ್ಯಕರ್ತರು ನಿಗದಿತ ಪ್ರದೇಶ ಬಿಟ್ಟು ಇತರ ಸ್ಥಳಗಳಿಂದ ಟ್ರ್ಯಾಕ್ಟರ್ ನುಗ್ಗಿಸಿದ್ದು, ಇದರಿಂದಾಗಿ ಪೊಲೀಸರು ಹಾಗೂ ರೈತರ ನಡುವೆ ಸಂಘರ್ಷ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ರೈತರ ಚಳುವಳಿ ಶಾಂತಿಯುತವಾಗಿಯೇ ನಡೆದಿತ್ತು. ರೈತರ ನಡುವೆ ಸಿಲುಕಿದ ಪೊಲೀಸರನ್ನು ರೈತರು ಸುರಕ್ಷಿತವಾಗಿ ತಾವೇ ಮುಂದೆ ನಿಂತು, ಆಕ್ರೋಶಿತ ರೈತರನ್ನು ತಡೆದು ಪೊಲೀಸರ ಗುಂಪಿಗೆ ಸೇರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಆದರೆ ಕೆಂಪುಕೋಟೆಯತ್ತ ಪ್ರಯಾಣಿಸಿದ ರೈತರ ಗುಂಪು ಏಕಾಏಕಿ ಪೊಲೀಸರ ಮೇಲೆ ಹಾಗೂ ಸಾರ್ವಜನಿಕ ಸೊತ್ತುಗಳ ಮೇಲೆ ದಾಳಿ ನಡೆಸಲು ಆರಂಭಿಸಿದೆ. ಇದೆಲ್ಲವೂ ಬಿಜೆಪಿ ಕಾರ್ಯಕರ್ತ ದೀಪ್ ಸಿಧು ಆದೇಶದ ಮೇಲೆ ನಡೆಸಲಾಗಿದೆ ಎನ್ನುವುದು ಇದೀಗ ತಿಳಿದು ಬಂದಿದೆ.
ದೀಪ್ ಸಿಧು ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿಯಾಗಿದ್ದು, ಈತ ಬಿಜೆಪಿಯ ಕಾರ್ಯಕರ್ತನಾಗಿದ್ದಾನೆ. ಆತ ಸಿಖ್ ಕೂಡ ಅಲ್ಲ. ದೀಪ್ ಸಿಧು ಪ್ರಧಾನಿ ಮೋದಿ ಜೊತೆಗೆ ಇರುವ ಚಿತ್ರ ಕೂಡ ಇದೆ. ರೈತರ ಆಂದೋಲನದ ದಿಕ್ಕು ತಪ್ಪಿಸಲು ಈ ರೀತಿಯ ಗೊಂದಲ ಸೃಷ್ಟಿಸಲಾಗಿದೆ. ಬ್ಯಾರಿಕೇಡ್ ಗಳನ್ನು ಮುರಿದು, ಅಶಾಂತಿ ಸೃಷ್ಟಿಸಿದವರು ಚಳುವಳಿಯ ಭಾಗವಾಗಿರಲಿಲ್ಲ ಎಂದು ರೈತ ಮುಖಂಡ ರಾಕೇಶ್ ತಿಳಿದ್ದಾರೆ.