ಕೊರೊನಾ ಬಂದಿದ್ದು ನಮ್ಮಿಂದಾಗಿ | ಮಕ್ಕಳನ್ನು ಕೊಂದು ಜೈಲಿನಲ್ಲಿರುವ ಬುದ್ಧಿವಂತ ಕೊಲೆಗಾರ ದಂಪತಿಯ ಹೇಳಿಕೆ
ಮದನಪಲ್ಲಿ: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ವಿದ್ಯಾವಂತ ದಂಪತಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ, ಭೀಕರವಾಗಿ ಹತ್ಯೆ ಮಾಡಿದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸತ್ಯ ಯುಗದಲ್ಲಿ ಮಕ್ಕಳು ಮತ್ತೆ ಹುಟ್ಟಿ ಬರುತ್ತಾರೆ ಎಂದು ಮಕ್ಕಳನ್ನು ಕೊಂದಿರುವುದಾಗಿ ಈ ದಂಪತಿ ಹೇಳಿಕೊಂಡಿದ್ದರು. ಇದೀಗ ತಮ್ಮಿಂದಾಗಿಯೇ ಕೊರೊನಾ ವೈರಸ್ ವಿಶ್ವಕ್ಕೆ ವ್ಯಾಪಿಸಿದೆ ಎಂದು ಈ ದಂಪತಿ ಹೇಳಿಕೆ ನೀಡಿದ್ದಾರೆ.
ಐಐಟಿ ಪ್ರೊಫೆಸರ್ ಪುರುಷೋತ್ತಮ ನಾಯ್ಡು ಹಾಗೂ ಗಣಿತ ಶಾಸ್ತ್ರದ ಎಂಎಸ್ ಸಿ ಪದವಿಯಲ್ಲಿ ಗೋಲ್ಡ್ ಮೆಡೆಲ್ ಪಡೆದಂತಹ ಪದ್ಮಜಾ ತಮ್ಮ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದಾರೆ. ಇದೀಗ ಇವರನ್ನು ಮದನಪಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೇ ದಂಪತಿ ಚಿತ್ರವಿಚಿತ್ರ ಹೇಳಿಕೆ ನೀಡುತ್ತಿದ್ದು, ಇದು ಪೊಲೀಸರ ತನಿಖೆಗೆ ಹಿನ್ನಡೆಯನ್ನುಂಟು ಮಾಡಿದೆ.
ವಿದ್ಯಾವಂತೆಯಾಗಿರುವ ಪದ್ಮಜಾ ಮದನಪಲ್ಲಿ ಪಟ್ಟಣದ ಐಐಟಿ ಟ್ಯಾಲೆಂಟ್ ಶಾಲೆಯ ಪ್ರಿನ್ಸಿಪಾಲ್ ಆಗಿದ್ದಾರೆ. ಇಷ್ಟೊಂದು ವಿದ್ಯಾವಂತೆಯಾಗಿರುವ ಮಹಿಳೆ, ಪೊಲೀಸರು ಈಕೆಯನ್ನು ವಿಚಾರಣೆ ನಡೆಸುವ ವೇಳೆ ವಿಚಿತ್ರವಾಗಿ ಹೇಳಿಕೆ ನೀಡಿದ್ದಾಳೆ. ನಾನು ಪಾರ್ವತಿ, ನನ್ನ ಪತಿ ಪರಮೇಶ್ವರ(ಶಿವ) ಎಂದು ಮಹಿಳೆ ಹೇಳಿದ್ದಾರೆ. ಪದ್ಮಜಾ ಅವರಿಗೆ ಕೊರೊನಾ ಟೆಸ್ಟ್ ಮಾಡಲು ಪೊಲೀಸರು ಮುಂದಾದಾಗ, “ಕೊರೊನಾ ವೈರಸ್ ಬಂದಿರುವುದು ನನ್ನಿಂದಾಗಿ, ಚೀನಾದಿಂದ ಅಲ್ಲ. ಅದಕ್ಕೆ ನನ್ನ ಪತಿ ಶಿವ ಕಾರಣ” ಮಾರ್ಚ್ ಒಳಗೆ ಕೊರೊನಾ ವೈರಸ್ ಹೋಗಲಿದೆ ಎಂದು ಹೇಳಿದ್ದಾರೆ.
ಈ ದಂಪತಿಯ ಮುಖದಲ್ಲಿ ತಮ್ಮ ಮಕ್ಕಳನ್ನು ಕೊಂದಿರುವ ಬಗ್ಗೆ ಯಾವುದೇ ಪಶ್ಚಾತಾಪ ಕೂಡ ಕಂಡು ಬರುತ್ತಿಲ್ಲ ಎಂದು ಹೇಳಲಾಗಿದೆ. ಈ ದಂಪತಿ ಬುದ್ಧಿವಂತ ಕೊಲೆಗಾರರಾಗಿದ್ದು, ತಮ್ಮ ಮಕ್ಕಳನ್ನು ವ್ಯವಸ್ಥಿತವಾಗಿ ಕೊಲೆ ಮಾಡಿ ಈಗ ನಾಟಕವಾಡುತ್ತಿದ್ದಾರೆ. ತಮ್ಮನ್ನು ಮಾನಸಿಕ ಅಸ್ವಸ್ಥರು ಎಂದು ಪೊಲೀಸರು, ನ್ಯಾಯಾಲಯ ಪರಿಗಣಿಸುವಂತೆ ನಾಟಕವಾಡುತ್ತಿದ್ದಾರೆ. ಪತಿ ಹಾಗೂ ಪತ್ನಿ ಒಂದೇ ಬಾರಿಗೆ ಮಾನಸಿಕ ಅಸ್ವಸ್ಥರಾಗಲು ಸಾಧ್ಯವೇ? ಇಬ್ಬರಿಗೂ ಒಂದೇ ರೀತಿಯ ಮಾನಸಿಕ ಕಾಯಿಲೆ ಬರಲು ಹೇಗೆ ಸಾಧ್ಯ ? ಯಾವುದೋ ಬೇರೆ ವಿಚಾರಕ್ಕೆ ಇಬ್ಬರು ಪುತ್ರಿಯರನ್ನು ಹತ್ಯೆ ಮಾಡಿರುವ ದಂಪತಿ ಸತ್ಯ ಯುಗದ ಕಥೆ ಕಟ್ಟಿ, ಜನರು, ಪೊಲೀಸರು, ನ್ಯಾಯಾಲಯವನ್ನು ಯಾಮಾರಿಸಲು ಯತ್ನಿಸುತ್ತಿದ್ದಾರೆ ಎನ್ನುವ ಅನುಮಾನಗಳು ಮೂಡಿವೆ.