ನಾಡಹಬ್ಬ ದಸರಾ ಮಹೋತ್ಸವ 2023: ಅರ್ಥಪೂರ್ಣ ಹಾಗೂ ಅದ್ದೂರಿ ಆಚರಣೆಗೆ ತೀರ್ಮಾನ
ಬೆಂಗಳೂರು: ನಾಡಹಬ್ಬ ದಸರಾ ಮಹೋತ್ಸವವನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಬೇಕು ಹಾಗೂ ದಸರಾ ಜನರ ಉತ್ಸವವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ದಸರಾ ಹಬ್ಬವನ್ನು ದಿನಾಂಕ 15.10.2023 ಬೆಳಿಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ಉದ್ಘಾಟನೆ ನೆರವೇರಲಿದ್ದು, ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಚರಿಸಲು ತೀರ್ಮಾನಿಸಲಾಯಿತು.
ವಿಶಿಷ್ಟ ದೀಪಾಲಂಕಾರ:
ಜಂಬೂ ಸವಾರಿ, ದೀಪಾಲಂಕಾರ, ಪಂಜಿನ ಕವಾಯತು ಬಹಳ ಮುಖ್ಯ ವಾಗಿ ಆಚರಿಸಲ್ಪಡುತ್ತದೆ. ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
5 ಗ್ಯಾರಂಟಿ ಬಿಂಬಿಸುವ ಸ್ತಬ್ಧಚಿತ್ರ:
ಸ್ತಬ್ಧಚಿತ್ರಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ರಾಜ್ಯದ ಪರಂಪರೆ, ಜಿಲ್ಲಾ ವೈಶಿಷ್ಟ್ಯತೆ ಗಳ ಜೊತೆಗೆ 5 ಗ್ಯಾರಂಟಿಗಳನ್ನು ಬಿಂಬಿಸಿ ಜನರಿಗೆ ಸಂದೇಶವನ್ನು ನೀಡುವಂತಿರಬೇಕು ಎಂದು ಸೂಚಿಸಿದರು.
ವಸ್ತು ಪ್ರದರ್ಶನ:
ದಸರಾ ಉದ್ಘಾಟನಾ ದಿನದಂದೇ ವಸ್ತು ಪ್ರದರ್ಶನವೂ ಉದ್ಘಾಟನೆಯಾಗಲಿದ್ದು,ವಸ್ತು ಪ್ರದರ್ಶನದಲ್ಲಿ ಸರ್ಕಾರಿ ಇಲಾಖೆಗಳು ಮಳಿಗೆಗಳನ್ನು ತೆರೆಯಬೇಕು ಹಾಗೂ ಎಲ್ಲ ಮಳಿಗೆಗಳೂ ಕೂಡ ಭರ್ತಿಯಾಗಿರಬೇಕೆಂದು ಸೂಚಿಸಿದರು.
ಸ್ಥಳೀಯ ಕಲಾವಿದರಿಗೆ ಪ್ರಾಶಸ್ತ್ಯ :
ಎಲ್ಲಾ ಪ್ರಕಾರಗಳಲಿ ರಾಜ್ಯದ ಉತ್ತಮ ಕಲಾವಿದರಿದ್ದಾರೆ. ಅವರಿಗೆ ಹೆಚ್ಚಿನ ಒತ್ತು ನೀಡಬೇಕು ಹಾಗೂ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಯುವ ದಸರಾದಲ್ಲಿ ವೇದಿಕೆ ಕಲ್ಪಿಸಿ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ನಿರ್ಧರಿಸಲಾಯಿತು.
ಪ್ರವಾಸೋದ್ಯಮಕ್ಕೆ ಒತ್ತು:
ನಾಡಹಬ್ಬ ದಸರಾ ನೋಡಲು ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲಸೌಕಾರ್ಯಗಳನ್ನು ಒದಗಿಸಬೇಕು. ಯಾವುದೇ ತೊಂದರೆಗಳಾಗದಂತೆ ಕ್ರಮ ವಹಿಸಬೇಕೆಂದು ತಿಳಿಸಿದರು. ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ.
ಏರ್ ಶೋ:
ದಸರಾ ಸಂದರ್ಭದಲ್ಲಿ ಏರ್ ಶೋ ಹಮ್ಮಿಕೊಳ್ಳಲು ಉದ್ದೇಶವಿದ್ದು, ಈ ಕುರಿತು ಕೇಂದ್ರ ರಕ್ಷಣಾ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.
ಶ್ರೀ ರಂಗಪಟ್ಟಣ ಹಾಗೂ ಚಾಮರಾಜನಗರಗಳಲ್ಲಿ ದಸರಾ ಉತ್ಸವ ನಡೆಸಲು ತೀರ್ಮಾನಿಸಲಾಯಿತು.
ದಸರಾ ಉದ್ಘಾಟಕರನ್ನು ಆಯ್ಕೆ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು.
ಕಾರ್ಯಕಾರಿ ಸಮಿತಿ ನಾಡಹಬ್ಬಕ್ಕೆ ಎಷ್ಟು ವೆಚ್ಚವಾಗಲಿದೆ ಎಂದು ತಿಳಿಸಲಿದ್ದು, ಅದರ ಆಧಾರದ ಮೇಲೆ ದಸರಾ ಹಬ್ಬಕ್ಕೆ ಅನುದಾನ ಒದಗಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು
ದಸರಾದಲ್ಲಿ ಅನಗತ್ಯ ಖರ್ಚುಗಳನ್ನು ಹಾಗೂ ಅನಗತ್ಯ ಕಾರ್ಯಕ್ರಮಗಳನ್ನು ಕೈ ಬಿಡಬೇಕು ಎಂದು ತೀರ್ಮಾನಿಸಲಾಯಿತು.
ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ: ಹೆಚ್.ಸಿ.ಮಹದೇವಪ್ಪ, ಶಿವರಾಜ ತಂಗಡಗಿ, ಹೆಚ್.ಕೆ.ಪಾಟೀಲ್, ಭೈರತಿ ಸುರೇಶ್,ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ,ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮೈಸೂರು ಜಿಲ್ಲಾಧಿಕಾರಿ ಡಾ: ರಾಜೇಂದ್ರ ಕೆ.ವಿ ಮೊದಲಾದವರು ಉಪಸ್ಥಿತರಿದ್ದರು.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw