ರಾಜ್ಯದ ಕಾಂಗ್ರೆಸ್ ಸರಕಾರದಿಂದ ದಲಿತರಿಗೆ ದೋಖಾ: ಛಲವಾದಿ ನಾರಾಯಣಸ್ವಾಮಿ ಟೀಕೆ - Mahanayaka

ರಾಜ್ಯದ ಕಾಂಗ್ರೆಸ್ ಸರಕಾರದಿಂದ ದಲಿತರಿಗೆ ದೋಖಾ: ಛಲವಾದಿ ನಾರಾಯಣಸ್ವಾಮಿ ಟೀಕೆ

chalavadi narayanaswamy
31/07/2023

ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ದಲಿತರಿಗೆ ದೋಖಾ ಮಾಡುವ ಸರಕಾರ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಈ ಕುರಿತು ಪತ್ರಿಕಾಹೇಳಿಕೆ ನೀಡಿರುವ ಅವರು, ಗ್ಯಾರಂಟಿ ಯೋಜನೆಗಳಿಗಾಗಿ ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ 11 ಸಾವಿರ ಕೋಟಿ ರೂಪಾಯಿಯನ್ನು ಬಳಸುತ್ತಿರುವುದಾಗಿ ರಾಜ್ಯದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಇದು ದಲಿತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರು ಮತ್ತು ಸಮಾಜ ಕಲ್ಯಾಣ ಸಚಿವರು ಮಾಡುತ್ತಿರುವ ಮಹಾಮೋಸ ಎಂದು ಟೀಕಿಸಿದ್ದಾರೆ.

ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಮುಂದಾದರೆ ಅದರ ವಿರುದ್ಧ ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ವತಿಯಿಂದ ರಾಜ್ಯಾದ್ಯಂತ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

ಹಿಂದಿನ ಕಾಂಗ್ರೆಸ್ ಸರಕಾರವು 2014ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗಾಗಿ ವಿಶೇಷ ಯೋಜನೆಯನ್ನು ಚಾಲ್ತಿಗೆ ತಂದಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ. ವಿಶೇಷ ಯೋಜನೆಯನ್ನು ಜಾರಿಗೊಳಿಸಿದ್ದರು. ಇಡೀ ದಲಿತ ಸಮುದಾಯವು ಕಾಂಗ್ರೆಸ್ ಸರಕಾರವು ಒಂದು ಉತ್ತಮ ಯೋಜನೆಯನ್ನು ಕೊಟ್ಟಿದೆ ಎಂದು ಖುಷಿ ಪಟ್ಟಿತ್ತು. ಆದರೆ, ಮಾನ್ಯ ಸಿದ್ದರಾಮಯ್ಯನವರು ಇಲ್ಲಿಯೂ ಕೂಡ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ದಲಿತರ ಹೆಸರಿನಲ್ಲಿ ಅವರ ಅಭಿವೃದ್ಧಿಗೆ 26 ಸಾವಿರ ಕೋಟಿ ರೂಪಾಯಿಯನ್ನು ನೀಡಿದ್ದೇನೆ ಎಂದು ಹೇಳಿ ಅದರ ಅಡಿಯಲ್ಲಿ 7 ಡಿ ಕಾನೂನನ್ನೂ ಜೊತೆಯಲ್ಲೇ ಜಾರಿ ಮಾಡಿದ್ದರು. ಈ ಹಣ ಖರ್ಚಾಗದಿದ್ದರೆ ಬೇರೆ ಇಲಾಖೆಗಳಿಗೆ ಖರ್ಚು ಮಾಡಬಹುದೆಂಬ ಅವಕಾಶವನ್ನು ಇದು ನೀಡಿತ್ತು ಎಂದು ವಿವರಿಸಿದ್ದಾರೆ.

ದಲಿತರಿಗೆ ಈ ಕಾಂಗ್ರೆಸ್ ಸರಕಾರವು ಅತಿ ಹೆಚ್ಚು ಹಣ ನೀಡಿ, ತೆರಿಗೆ ಹಣವನ್ನು ದಲಿತರಿಗೆ ಖರ್ಚು ಮಾಡುತ್ತಿದೆ ಎಂಬಂತೆ ಬೇರೆ ಬೇರೆ ಜಾತಿಯ ಸಾಮಾನ್ಯ ಜನರು ದಲಿತರ ಕುರಿತು ಸಿಟ್ಟಾಗುವಂತೆ ನಡೆದುಕೊಂಡಿತ್ತು. ಆದರೆ, ಸಿದ್ದರಾಮಯ್ಯನವರು ಮೆಟ್ರೊ, ಕೆರೆಗಳ ಹೂಳೆತ್ತಲು ಮತ್ತು ರಸ್ತೆ ಅಭಿವೃದ್ಧಿಗೆ ಪಿಡಬ್ಲ್ಯೂಡಿಗೆ ಸುಮಾರು 19 ಸಾವಿರ ಕೋಟಿಯಿಂದ 20 ಸಾವಿರ ಕೋಟಿ ಹಣವನ್ನು ಕೊಟ್ಟಿದ್ದರು. ಈ ಮೂಲಕ ದಲಿತರಿಗೆ ಸಿದ್ದರಾಮಯ್ಯರ ಸರಕಾರ ವಂಚನೆ ಮಾಡಿತ್ತು ಎಂದು ಅವರು ನೆನಪಿಸಿದ್ದಾರೆ.
ಆ ನಂತರ ಬಿಜೆಪಿ ಸರಕಾರವನ್ನು ಕೂಡ ಅವರು ಹಲವು ಸಂದರ್ಭದಲ್ಲಿ ‘ದಲಿತರಿಗೆ ನಾನು ವಿಶೇಷ ಯೋಜನೆ ಕೊಟ್ಟು ಬಹಳ ಸಹಾಯ ಮಾಡಿದ್ದೇನೆ. ಆದರೆ, ಬಿಜೆಪಿ ಅವರಿಗೆ ಸರಿಯಾಗಿ ಹಣ ಕೊಡುತ್ತಿಲ್ಲ’ ಎಂದು ಆಪಾದನೆಯನ್ನೂ ಮಾಡುತ್ತಿದ್ದರು. ನಾವು ಕಾನೂನುಬದ್ಧವಾಗಿ ಕೊಡಬಹುದಾದ ಎಲ್ಲ ಹಣವನ್ನು ದಲಿತರಿಗೆ ಸರಿಯಾಗಿ ನೀಡಿದ್ದೇವೆ. ಅದು ದಲಿತರಿಗೇ ಸೇರುವಂತೆ ನೋಡಿಕೊಂಡಿದ್ದೇವೆ ಎಂದು ವಿವರಿಸಿದ್ದಾರೆ.

ನಮ್ಮ ಕಾಲದಲ್ಲಿ ಅಂದರೆ, ಬಸವರಾಜ ಬೊಮ್ಮಾಯಿಯವರ ಸರಕಾರದ ಕಳೆದ ಬಜೆಟ್‍ನಲ್ಲಿ 30 ಸಾವಿರ ಕೋಟಿ ಮೊತ್ತವನ್ನು ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಗೆ ಮೀಸಲಿಟ್ಟಿದ್ದೆವು. ಇದನ್ನು ಕೂಡ ಟ್ವೀಟ್ ಮಾಡಿ ಸಿದ್ದರಾಮಯ್ಯನವರು ಅಣಕಿಸಿದ್ದರು. ಕೇವಲ 30 ಸಾವಿರ ಕೋಟಿ ನೀಡಿದ್ದಾರೆ. ಅವರಿಗೆ ಶೇ 24.5 ಹಣ ಮೀಸಲಿಟ್ಟರೆ 45 ಸಾವಿರ ಕೋಟಿ ಕೊಡಬೇಕಿತ್ತು. ಇವರು ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಈಗ ಅವರೇ ಬಜೆಟ್ ಮಂಡಿಸಿದಾಗ ನಾವು ನೀಡಿದ 30 ಸಾವಿರ ಕೋಟಿ ಬದಲಾಗಿ 34 ಸಾವಿರ ಕೋಟಿ ನೀಡಿದ್ದಾರೆ. ನಾವು ನಮ್ಮ ಬಜೆಟ್‍ನಡಿ ದಲಿತರ ಹಣ ಅವರ ಅಭಿವೃದ್ಧಿಗಾಗಿಯೇ ಮೀಸಲಾಗಬೇಕೆಂಬ ದೃಷ್ಟಿಯಿಂದ ಬೊಮ್ಮಾಯಿಯವರ 7 ಡಿ ರದ್ದು ಮಾಡುವುದಾಗಿ ಪ್ರಕಟಿಸಿದ್ದರು ಎಂದು ತಿಳಿಸಿದ್ದಾರೆ.

ಇದನ್ನು ಕಂಡ ಸಿದ್ದರಾಮಯ್ಯನವರು ತಾವು ಕೂಡ 7 ಡಿ ರದ್ದು ಮಾಡುವುದಾಗಿ ತಿಳಿಸಿದ್ದರು. ಆದರೆ, ಅವರು 24.5 ಹಣ ಮೀಸಲಿಟ್ಟಿರಲಿಲ್ಲ. ಕೇವಲ 4 ಸಾವಿರ ಕೋಟಿ ಹೆಚ್ಚಿಸಿದ್ದರು. ಈಗ 7 ಡಿಯನ್ನು ಹಾಗೇ ಇಟ್ಟು 11 ಸಾವಿರ ಕೋಟಿಯನ್ನು ಮತ್ತೆ ಗ್ಯಾರಂಟಿಗಳಿಗಾಗಿ ತೆಗೆಯಲಾಗಿದೆ. ಇದು ದಲಿತರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಸಚಿವ ಮಹದೇವಪ್ಪ ಅವರು ಮಾಡಿದ ಮಹಾಮೋಸ ಎಂದು ಟೀಕಿಸಿದ್ದಾರೆ.

ಕಳೆದ ವಾರವೇ ಇದನ್ನು ನಾನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದೆ. ಆಗ ಸರಕಾರವು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇವತ್ತು ಸಚಿವ ಮಹದೇವಪ್ಪ ಅವರು ಅದರ ಕುರಿತು ಮಾಹಿತಿ ನೀಡಿದ್ದಾರೆ. ಗ್ಯಾರಂಟಿಗಳಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ. ಹಣವನ್ನು ಸರಕಾರ ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಬಳಸಕೂಡದು ಎಂದು ಅವರು ಆಗ್ರಹಿಸಿದ್ದಾರೆ.
ಈ ಹಣವನ್ನು ದಲಿತರ ಅಭಿವೃದ್ಧಿ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಬಳಸಿದರೆ ಕಾಂಗ್ರೆಸ್ ದಲಿತರಿಗೆ ಮಾಡುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ರಾಜ್ಯಾದ್ಯಂತ ಬಿಜೆಪಿ ಎಸ್‍ಸಿ ಮೋರ್ಚಾ ವತಿಯಿಂದ ಹೋರಾಟ ಮಾಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ