ಎದೆಹಾಲು - ಶಿಶುವಿಗೆ ತಾಯಿಯ ಶ್ರೇಷ್ಠಪಾನ ಮತ್ತು ವಿಶ್ವ ಸ್ತನ್ಯಪಾನ ಸಪ್ತಾಹ - Mahanayaka

ಎದೆಹಾಲು – ಶಿಶುವಿಗೆ ತಾಯಿಯ ಶ್ರೇಷ್ಠಪಾನ ಮತ್ತು ವಿಶ್ವ ಸ್ತನ್ಯಪಾನ ಸಪ್ತಾಹ

world breastfeeding week
07/08/2023

  • ರವಿನಂದನ್ ಎ.ಪಿ. | ವೇದಶ್ರೀ ಕೆ.

ಎದೆಹಾಲು ಎಂಬುದು ಭೂಲೋಕದ ಅಮೃತವೇ ಸರಿ ಅಲ್ಲವೇ? ಭೂಮಿಗೆ ಬಂದ ಮಗು ತನ್ನ ಮೊದಲ ಕೂಗು ಅಥವಾ ಆಕ್ರಂದನೆ ಮಾಡಿದ ಕೂಡಲೆ ಅದರ ಬಾಯಿಗೆ ಸಿಗುವ ಮೊದಲ ಆಹಾರವೇ ತಾಯಿಯ ಎದೆಹಾಲು. ಎದೆಹಾಲು ಮಗುವಿನ ಪಾಲಿಗೆ ಅಮೃತ ಮತ್ತು ಸಂಜೀವಿನಿ.

ವಿಶ್ವ ಸ್ತನ್ಯಪಾನ ವಾರ (World Breastfeeding Week – ವರ್ಲ್ಡ್ ಬ್ರೆಸ್ಟ್ಫೀಂಡಿಂಗ್ ವೀಕ್) – ಇದು ವಾರ್ಷಿಕ ಆಚರಣೆಯಾಗಿದ್ದು, ಇದನ್ನು ಪ್ರತಿವರ್ಷ ಆಗಸ್ಟ್ 1 ರಿಂದ ಆಗಸ್ಟ್ 7ರ ವರೆಗೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ.

ಸ್ತನ್ಯಪಾನ ಕ್ರಿಯೆಗಾಗಿ ವಿಶ್ವ ಅಲೈಯನ್ಸ್, ವಿಶ್ವ ಆರೋಗ್ಯ ಸಂಸ್ಥೆ (WHO), ವಿಶ್ವ ಸಂಸ್ಥೆಯ ಮಕ್ಕಳ ನಿಧಿ (UNICEF), ವಿಶ್ವ ಸ್ತನ್ಯಪಾನ ವಾರ (WBW) ವು ಸಂಘಟಿತವಾಗಿದ್ದು, ಮಗು ಜನಿಸಿದ ಮೊದಲ ಆರು ತಿಂಗಳ ಕಾಲ ವಿಶೇಷ ಎದೆಹಾಲುಣಿಸುವಿಕೆಯನ್ನು ಉತ್ತೇಜಿಸುವ ಗುರಿಯೊಂದಿಗೆ 1991ರಲ್ಲಿ ಆರಂಭಿಸಲಾಯಿತು. ಸ್ತನ್ಯಪಾನ, ಮಹತ್ವದ ಪೋಷಕಾಂಶಗಳನ್ನು ಮಗುವಿಗೆ ಒದಗಿಸುವ ಮೂಲಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನ್ಯುಮೋನಿಯಾ, ಮತ್ತು ಇನ್ನಿತರ ಮಾರಣಾಂತಿಕ ರೋಗಗಳಿಂದ ರಕ್ಷಣೆ ಮತ್ತು ಮಗುವಿನ ಬೆಳವಣಿಗೆಯನ್ನು ಅಭಿವೃದ್ಧಿಪಡಿಸುತ್ತದೆ. ಆದ್ದರಿಂದ ನಾವೆಲ್ಲರೂ ಶ್ರೇಷ್ಠಪಾನವಾದ ಈ ಸ್ತನ್ಯಪಾನ ಕ್ರಿಯೆಯ ಉತ್ತೇಜನಕ್ಕೆ ಕೈಜೋಡಿಸೋಣ. ತಾಯಿಯಲ್ಲಿ ಮೊದಲು ಬರುವ ಎದೆಹಾಲು ಅಥವಾ ಗಿಣ್ಣುಹಾಲು (ಕೊಲಸ್ಟ್ರಮ್) ಒಳ್ಳೆಯದಲ್ಲ ಎಂಬ ಮತ್ತು ಇನ್ನು ಹಲವು ಅಪನಂಬಿಕೆಗಳು ಕೆಲವರಲ್ಲಿದೆ, ಅದನ್ನು ತೊರೆದು ಮಗುವಿಗೇ ಎಂದು ಮೀಸಲಾದ ಎದೆಹಾಲನ್ನು ಮಗುವಿಗೆ ನೀಡುವುದು ಉತ್ತಮ ಮತ್ತು ಸಮಂಜಸ. ಆದಕಾರಣ ಎದೆಹಾಲಿನ ಉಪಯುಕ್ತ ಮತ್ತು ಮಹತ್ವವಾದ ಮಾಹಿತಿಯನ್ನು ನೀಡಲು ಬಯಸುತ್ತೇವೆ.

ವೈದ್ಯಕೀಯ ವಿಜ್ಞಾನದ ಪ್ರಕಾರ ಮಗು ಹುಟ್ಟಿ ಆರು ತಿಂಗಳವರೆಗೆ ಬೇರೆ ಯಾವುದೇ ಆಹಾರವನ್ನು ನೀಡದೇ ತಾಯಿಯ ಎದೆಹಾಲನ್ನು ಮಾತ್ರ ನೀಡಬೇಕು, ಅದು ಜೀವನಪರ್ಯಂತ ಆ ಮಗುವಿಗೆ ಆರೋಗ್ಯವಾಗಿರಲು ನೆರವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿಯಲ್ಲಿದೆ. ಸಸ್ತನಿ ಗ್ರಂಥಿಗಳ ಮೂಲಕ ಉತ್ಪತ್ತಿಯಾಗುವ ಹಾಲನ್ನು ಮಗು ಹುಟ್ಟಿದ ಅರ್ಧ ಗಂಟೆಯ ಒಳಗೆ ಉಣಿಸಲೇಬೇಕು ಎಂದು ವೈದ್ಯಕೀಯದಲ್ಲೊಂದು ನಿಯಮವಿದೆ.

ಇಂದಿನ ಕಾಲದ ತಾಯಂದಿರಿಗೆ ಕೆಲಸದ ಅಥವಾ ಉದ್ಯೋಗದ ಒತ್ತಡ ಹೆಚ್ಚಾಗಿರುತ್ತದೆ. ಇದು ಮಗುವಿಗೆ ಎದೆಹಾಲು ಕುಡಿಸಲು ಅಡ್ಡಿಯನ್ನುಂಟುಮಾಡುತ್ತದೆ. ಹಿಂದಿನ ಕಾಲದಂತೆ ಇಂದಿನ ತಾಯಂದಿರಿಗೆ ಸರಿಯಾಗಿ ಆರು ತಿಂಗಳು ಕೂಡ ಎದೆಹಾಲು ಕುಡಿಸಲು ಸಾಧ್ಯವಾಗುವುದಿಲ್ಲ. ಮಗುವಿಗೆ ಕಾಲಕಾಲಕ್ಕೆ ಸರಿಯಾಗಿ ಎದೆಹಾಲು ಸಿಗದಿದ್ದರೆ ಅಜೀರ್ಣ ಮೊದಲಾದ ಸಮಸ್ಯೆಗಳು ಉದ್ಭವವಾಗುತ್ತವೆ. ಎದೆಹಾಲಿಗೆ ಬದಲಾಗಿ ಬೇರೆ ಹಾಲು ಕೊಟ್ಟರೆ ಮಗುವಿಗೆ ಜೀರ್ಣವಾಗುವುದು ನಿಧಾನ ಮತ್ತು ಕಷ್ಟ. ಅಲ್ಲದೆ ಇತರ ಆಹಾರಗಳಲ್ಲಿ ಮಗುವಿನ ದೇಹಕ್ಕೆ ಬೇಕಾದ ಸಾಕಷ್ಟು ವಿಟಮಿನ್, ಪ್ರೊಟೀನ್ ಮತ್ತು ಕೊಬ್ಬು ಎದೆಹಾಲಿನಲ್ಲಿ ಸಿಕ್ಕಂತೆ ಸಿಗುವುದಿಲ್ಲ. ಹೀಗಾಗಿ, ಮಗುವಿನಲ್ಲಿ ಖಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿ ಕುಂಠಿತವಾಗುತ್ತದೆ ಮತ್ತು ಮಗುವಿಗೆ ಆಗಾಗ ಸೋಂಕು ಅಥವಾ ಖಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆಗೆ ಅಲೆಯುತ್ತಿರಬೇಕಾಗುತ್ತದೆ.

ಎದೆಹಾಲಿನಿಂದ ಮಗುವಿಗೆ ಆಗುವ ಅನುಕೂಲಗಳು:

• ಎದೆಹಾಲು ಮಿಕ್ಕ ಎಲ್ಲಾ ಆಹಾರಗಳಿಗಿಂತಲೂ ಸರ್ವಶ್ರೇಷ್ಠ, ಅದರಲ್ಲಿ ಮಗುವಿನ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಬೇಕಾದ ವಿಟಮಿನ್, ಪ್ರೊಟೀನ್, ಕೊಬ್ಬಿನ ಅಂಶಗಳು ಹೇರಳವಾಗಿರುತ್ತದೆ.

• ಮಗು ಜನಿಸಿದ ತಕ್ಷಣ ತಾಯಿಯ ಎದೆಯಲ್ಲಿರುವ ಹಾಲಿನಲ್ಲಿ ಇಮ್ಯುನೋಗ್ಲೋಬಿನ್ ಐಜಿಎ (Igಂ) ಯಿದ್ದು, ಇದು ಸಾಂಕ್ರಾಮಿಕ ಜೀವಿಗಳ ವಿರುದ್ಧ ರಕ್ಷಣಾತ್ಮಕ ಪದರವನ್ನು ಒದಗಿಸುತ್ತದೆ. ಆ ಮೂಲಕ ಶಿಶುಗಳನ್ನು ಸಾಂಕ್ರಾಮಿಕ ರೋಗಗಳಿಂದ ತಡೆಗಟ್ಟುತ್ತದೆ.

• ಎದೆಹಾಲು ಕುಡಿಯುತ್ತಿರುವ ಮಕ್ಕಳು ಬೇರೆ ಮಕ್ಕಳಿಗಿಂತ ಹೆಚ್ಚು ಅಥವಾ ಆರೋಗ್ಯಕರವಾದ ತೂಕವನ್ನು ಹೊಂದಿರುತ್ತವೆ.

• ಮಗುವಿನ ಬುದ್ಧಿಶಕ್ತಿ ಮೇಲೆ ಕೂಡ ತಾಯಿಯ ಎದೆಹಾಲು ಪರಿಣಾಮ ಬೀರುತ್ತದೆ. ಎದೆಹಾಲು ಕುಡಿದು ಬೆಳೆದ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಚುರುಕು ಮತ್ತು ಬುದ್ಧಿಶಾಲಿಗಳಾಗಿರುತ್ತಾರೆ.

• ತಾಯಿ-ಮಗುವಿನ ಮಧ್ಯೆ ಬಾಂಧವ್ಯ ಹೆಚ್ಚಾಗಲು ಕೂಡ ಎದೆಹಾಲು ಕುಡಿಸುವುದು ಮುಖ್ಯವಾಗಿರುತ್ತದೆ. ತಾಯಿ-ಮಗುವಿನ ಸ್ಪರ್ಶ, ನೋಟ ಮಗುವಿಗೆ ರಕ್ಷಣೆಯ ಭಾವನೆ ನೀಡುತ್ತದೆ. ಈ ಅನುಭವ ಮಕ್ಕಳಿಗೆ ಮತ್ತು ತಾಯಿಗೆ ಬೇರೆಲ್ಲೂ ಸಿಗುವುದಿಲ್ಲ.

-ಇದಿಷ್ಟೇ ಅಲ್ಲದೇ ತಾಯಿಗೂ ಎದೆಹಾಲುಣಿಸುವುದು ಸಾಕಷ್ಟು ಲಾಭದಾಯಕ.

ಎದೆಹಾಲುಣಿಸುವುದರಿಂದ ತಾಯಿಗೆ ಆಗುವ ಅನುಕೂಲಗಳು:

• ಎದೆಹಾಲು ಕೊಟ್ಟು ಮಗುವನ್ನು ಬೇಗ ಸಂತೈಸಬಹುದು.

• ಎದೆಹಾಲುಣಿಸುವುದರಿಂದ ಪ್ರಸವದ ನಂತರದ ರಕ್ತಸ್ರಾವದಿಂದಾಗುವ ತೊಂದರೆ ಕಡಿಮೆಯಾಗುತ್ತದೆ.

• ಮಗು ಎದೆಹಾಲು ಕುಡಿಯುತ್ತಿರುವ ತಾಯಂದಿರಲ್ಲಿ ಪ್ರಸವದ ನಂತರ ಋತುಚಕ್ರವು ನಿಧಾನವಾಗಿ ಆಗುತ್ತದೆ. ಆದುದರಿಂದ ಒಂದು ಪ್ರಸವದ ನಂತರ ಇನ್ನೊಂದು ಪ್ರಸವಕ್ಕೆ ಅಂತರ ಜಾಸ್ತಿಯಾಗುತ್ತದೆ.

• ಎದೆಯ ಕ್ಯಾನ್ಸರ್ (ಬ್ರೆಸ್ಟ್ ಕ್ಯಾನ್ಸರ್) ಮತ್ತು ಅಂಡಾಶಯದ ಕ್ಯಾನ್ಸರನ್ನು (ಓವರಿಯನ್ ಕ್ಯಾನ್ಸರ್) ಸುಲಭ ರೀತಿಯಲ್ಲಿ ತಡೆಗಟ್ಟಬಹುದು.

• ಮೊಲೆಹಾಲು ಸುಲಭವಾಗಿ ತಾಯಿಯ ಶರೀರದಿಂದ ಸಿಗುವ ಕಾರಣ ಹೊರಗಿನ ಹಾಲಿಗಾಗಿ ದುಂದು ವೆಚ್ಚಮಾಡಬೇಕಾಗಿಲ್ಲ.

ಹಾಲುಣಿಸುವ ಕ್ರಮ:

• ಎದೆಹಾಲು ಉಣಿಸುವ ಮುನ್ನ ತಾಯಿ ತಾಳ್ಮೆಯಿಂದಿರಬೇಕು, ಒತ್ತಡಮುಕ್ತವಾಗಿರಬೇಕು. ತಾಯಿಯ ಮಾನಸಿಕ ಸ್ಥಿತಿ ಮಗುವಿಗೆ ಸರಾಗವಾಗಿ ಎದೆಹಾಲು ಸಿಗಲು ಕಾರಣವಾಗುತ್ತದೆ. ಆದ್ದರಿಂದ ಹಾಲುಣಿಸುವ ಸಮಯದಲ್ಲಿ ಆದಷ್ಟು ತಾಯಂದಿರು ತಮ್ಮ ಚಿತ್ತವನ್ನು ಮಗುವಿನ ಕಡೆ ಇರಿಸುವುದು ಸೂಕ್ತ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಮಾಡುವುದು ಜೀವನಶೈಲಿಯಾಗಿಹೋಗಿದೆ. ಆದರೆ, ಮಗುವಿಗೆ ಹಾಲುಣಿಸುವ ಸಮಯದಲ್ಲಾದರು ತಾಯಂದಿರು ಮೊಬೈಲ್ ಬಳಕೆ ನಿಷೇಧಿಸುವುದು ಸೂಕ್ತ.

• ನವಜಾತ ಶಿಶುವಿಗೆ ಸಾಮಾನ್ಯವಾಗಿ ಒಂದು ತಿಂಗಳವರೆಗೆ ದಿನದಲ್ಲಿ 8 ರಿಂದ 12 ಭಾರಿ ಹಾಲುಣಿಸಬೇಕಾಗುತ್ತದೆ.

• ಆರೋಗ್ಯವಂತ ನವಜಾತ ಶಿಶುವಿಗೆ 4 ಗಂಟೆಗಿಂತ ಜಾಸ್ತಿ ಹೊತ್ತು ಹಾಲುಣಿಸದೆ ಇರುವುದು ಸರಿಯಲ್ಲ. ಕನಿಷ್ಟ ಪಕ್ಷ 90 ನಿಮಿಷದಿಂದ 3 ಗಂಟೆಯ ಒಳಗೆ ಮಗುವಿಗೆ ಹಾಲುಣಿಸುವುದು ಉತ್ತಮ.

• ಒಂದು ತಿಂಗಳು ಕಳೆದ ನಂತರ ದಿನಕ್ಕೆ 7-8 ಸಲ ಹಾಲುಣಿಸಿದರೂ ಸಾಕಾಗುತ್ತದೆ. ಸಾಮಾನ್ಯವಾಗಿ ಮಗುವಿಗೆ ಹೊಟ್ಟೆ ತುಂಬುವ ತನಕ ಅಂದರೆ ಸುಮಾರು 15 ರಿಂದ 20 ನಿಮಿಷದವರೆಗೆ ಹಾಲುಣಿಸಬೇಕು.

• ಮಗುವಿಗೆ 2 ವರ್ಷದವರೆಗೆ ಹಾಲುಣಿಸಿದರೆ ತುಂಬಾ ಉತ್ತಮ. ಆದಾಗದಿದ್ದಲ್ಲಿ ಕನಿಷ್ಟ ಪಕ್ಷ 6 ತಿಂಗಳವರೆಗೆ ಹಾಲುಣಿಸುವುದು ವೈದ್ಯಕೀಯದ ಪ್ರಕಾರ ಕಡ್ಡಾಯ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯು (WHO) ಕೂಡ ಶಿಫಾರಸ್ಸು ಮಾಡುತ್ತದೆ.

“ಸ್ತನ್ಯಪಾನ – ತಾಯಿಯ ಮಮತೆಯ ಪ್ರತೀಕ”
ಸ್ತನ್ಯಪಾನ ರಕ್ಷಣೆ: ಎಲ್ಲರ ಪಾಲಿನ ಜವಾಬ್ದಾರಿ.

ಈ ಮಾಹಿತಿಯನ್ನು ಸಾರ್ವಜನಿಕರ ಉಪಯೋಕ್ಕಾಗಿ ಮತ್ತು ಸದ್ದುದೇಶದಿಂದ ಬರೆಯಲಾಗಿದೆ.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ