ಅನಧಿಕೃತ ಫ್ಲೆಕ್ಸ್ ಗೆ ನಿರ್ಬಂಧ, ನಿಯಮ ಮೀರಿದರೆ 50 ಸಾವಿರ ದಂಡ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: “ಕೋರ್ಟ್ ನಿರ್ದೇಶನದಂತೆ ಬೆಂಗಳೂರು ನಗರದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಅನಧಿಕೃತ ಫ್ಲೆಕ್ಸ್ ನಿರ್ಬಂಧ ಹೇರಲಾಗುವುದು. ಈ ನಿರ್ಧಾರ ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಒಂದು ವೇಳೆ ಅನಧಿಕೃತ ಫ್ಲೆಕ್ಸ್ ಹಾಕಿದರೆ ಅವರು ಯಾರೇ ಆದರೂ ಪಾಲಿಕೆ ಅಧಿಕಾರಿಗಳು ಎಫ್ ಐಆರ್ ದಾಖಲಿಸಿ, ಒಂದು ಫ್ಲೆಕ್ಸ್ ಗೆ ತಲಾ 50 ಸಾವಿರ ದಂಡ ವಿಧಿಸಲಿದ್ದಾರೆ” ಎಂದು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕುಮಾರಕೃಪಾ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಂಗಳವಾರ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
“ಅನಧಿಕೃತ ಫ್ಲೆಕ್ಸ್ ತೆರವಿಗೆ ಕೋರ್ಟ್ ಮೂರು ವಾರಗಳ ಗಡುವು ನೀಡಿದೆ. ನನ್ನದೂ, ಮುಖ್ಯಮಂತ್ರಿಗಳದ್ದೂ ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಎಲ್ಲ ಅನಧಿಕೃತ ಫ್ಲೆಕ್ಸ್ ಗಳನ್ನು ನಿಷೇಧಿಸಲಾಗುವುದು. ಈ ವಿಚಾರವಾಗಿ ನಮ್ಮ ಸಚಿವರು ಹಾಗೂ ನಾಯಕರಿಗೆ ಮನವಿ ಮಾಡಿದ್ದೇನೆ. ಫ್ಲೆಕ್ಸ್ ನಿಷೇಧ ಕುರಿತು ಮುಂದಿನ ದಿನಗಳಲ್ಲಿ ನೀತಿ ರೂಪಿಸುತ್ತೇವೆ.
ಇನ್ನು ಮುಂದೆ ಜನ್ಮದಿನ, ಶ್ರದ್ಧಾಂಜಲಿ, ಶುಭ ಸಂದೇಶ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಚಾರ ಸೇರಿದಂತೆ ಯಾವುದೇ ಅನಧಿಕೃತ ಫ್ಲೆಕ್ಸ್ ಹಾಕುವಂತಿಲ್ಲ. ಇದಕ್ಕೆ ಎಲ್ಲಾ ಪಕ್ಷಗಳು ಹಾಗೂ ನಾಗರೀಕರು ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ. ಸರ್ಕಾರದಿಂದ ಫ್ಲೆಕ್ಸ್ ಹಾಕುವುದಿದ್ದರೆ, ಸಮಯ, ಅಳತೆ, ಸ್ಥಳ ನಿಗದಿ ಮಾಡಿ ಅನುಮತಿ ನೀಡಲಾಗುವುದು. ಇದಕ್ಕೂ ನೀತಿ ರೂಪಿಸಲಾಗುತ್ತಿದೆ. ಈಗಾಗಲೇ ನಗರದಲ್ಲಿ 59 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದೆ. 134 ದೂರುಗಳು ಬಂದಿದ್ದು, 40 ಎಫ್ ಐಆರ್ ದಾಖಲಿಸಲಾಗಿದೆ.”
ಖಾಸಗಿ ಸ್ಥಳಗಳಲ್ಲಿ ಫ್ಲೆಕ್ಸ್ ಹಾಕಲು ನಿರ್ಬಂಧ ಇರುವುದಿಲ್ಲ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಂಚಾರಿ ದಟ್ಟಣೆ ನಿಯಂತ್ರಣ: ಎಕ್ಸ್ ಪ್ರೆಷನ್ ಆಫ್ ಇಂಟರೆಸ್ಟ್ ಅವಧಿ ಆ.17 ರವರೆಗೆ ವಿಸ್ತರಣೆ:
“ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟನಲ್ ರಸ್ತೆ, ಮೇಲ್ಸೇತುವೆ ಸೇರಿದಂತೆ ಪರಿಹಾರ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಇದಕ್ಕಾಗಿ ಬಿಡಿಎ ಹಾಗೂ ಬಿಬಿಎಂಪಿ ಮೂಲಕ ಎಕ್ಸ್ ಪ್ರೆಷನ್ ಆಫ್ ಇಂಟರೆಸ್ಟ್ ಅನ್ನು ಕರೆಯಲಾಗಿತ್ತು. ಅದರ ಅವಧಿ ನಿನ್ನೆಗೆ ಮುಕ್ತಾಯಗೊಂಡಿತ್ತು. ಆದರೆ ಇನ್ನು ಹೆಚ್ಚಿನ ಸಂಸ್ಥೆಗಳು ಇದರಲ್ಲಿ ಭಾಗವಹಿಸಲು ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಈ ಅವಧಿಯನ್ನು ಒಂದು ವಾರ ಅಂದರೆ ಅ.17 ರವರೆಗೆ ವಿಸ್ತರಿಸಲಾಗಿದೆ. ಗ್ಲೋಬಲ್ ಟೆಂಡರ್ ಕರೆಯಲಾಗಿದೆ.
ಮೆಟ್ರೋ ಸುರಂಗದಲ್ಲಿ ಕೇವಲ ಒಂದು ಮಾರ್ಗದಲ್ಲಿ ಮಾತ್ರ ಚಲಿಸಬಹುದಾಗಿದೆ. ಹೀಗಾಗಿ ಟನಲ್ ರಸ್ತೆಯಲ್ಲಿ ದ್ವಿಮುಖ ಮಾರ್ಗ ಇರಬೇಕು ಎಂದು ಸಲಹೆ ನೀಡಿದ್ದೇನೆ. ಅನೇಕ ಸಂಸ್ಥೆಗಳು ವಿನ್ಯಾಸ, ಆರ್ಥಿಕ ಸಾಮರ್ಥ್ಯದ ಬಗ್ಗೆ ಚರ್ಚೆ ಮಾಡಲು ಮುಂದೆ ಬಂದಿವೆ.
ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಂಗಳೂರಿನ ಸಂಚಾರಿ ದಟ್ಟಣೆ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬ ವಿಚಾರವಾಗಿ ನಾವು ಅನೇಕ ಸುತ್ತು ಚರ್ಚೆ ಮಾಡಿದ್ದೇವೆ. ಸಾರ್ವಜನಿಕರಿಂದ 70 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿದ್ದು, ಇನ್ನು ಕೆಲವರ ಜತೆ ಚರ್ಚೆ ಮಾಡಿ ಸಲಹೆ ಪಡೆಯಲಿದ್ದೇನೆ.
ಶಾಲಾ ಮಕ್ಕಳಿಂದ, ಹಿರಿಯ ನಾಗರೀಕರು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದವರಿಂದ ಸಲಹೆಗಳನ್ನು ಪಡೆದಿದ್ದು, ಇವನ್ನು ನಾಲ್ಕೈದು ವಿಭಾಗಗಳಲ್ಲಿ ಪರಿಶೀಲನೆ ಮಾಡಿ ಸಾರಾಂಶ ನೀಡುವ ಜವಾಬ್ದಾರಿಯನ್ನು ಕೆಲವು ಸಂಸ್ಥೆಗಳಿಗೆ ವಹಿಸಲಾಗಿದೆ.
ದೆಹಲಿಯಲ್ಲಿ ಕೇಂದ್ರ ಭೂಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದೇನೆ. ನೆಲಮಂಗಲ, ಬಳ್ಳಾರಿ, ಕೋಲಾರ, ಹೊಸೂರು, ಮೈಸೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿಗಳು ಸೇರುವ ಹಾಗೂ ಬೆಂಗಳೂರು ನಗರದ ರಸ್ತೆಗಳು ಸಂಚಾರದಟ್ಟಣೆಗೆ ಕಾರಣವಾಗಿವೆ. ಇದರ ಪರಿಹಾರಕ್ಕೆ ಕೇಂದ್ರ ಸರ್ಕಾರ ಕೂಡ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದೇನೆ. ಯೋಜನೆ ರೂಪಿಸಿಕೊಂಡು ಬನ್ನಿ ಎಂದು ಅವರು ತಿಳಿಸಿದ್ದಾರೆ.”
ರಾಜ್ಯಪಾಲರಿಗೆ ಗುತ್ತಿಗೆದಾರರು ಪತ್ರ ಬರೆಯುವುದರಲ್ಲಿ ತಪ್ಪಿಲ್ಲ:
“ಗುತ್ತಿಗೆದಾರರು ರಾಜ್ಯಪಾಲರಿಗೆ ಪತ್ರಬರೆದಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ರಾಜ್ಯಪಾಲರಿಗಾದರೂ ಪತ್ರ ಬರೆಯಲಿ, ವಿರೋಧ ಪಕ್ಷ ಅಥವಾ ಆಡಳಿತ ಪಕ್ಷದವರನ್ನು ಕೇಳಲಿ. ಅವರಿಗೆ ನೋವಾಗಿದೆ. ಕೇಳುವುದರಲ್ಲಿ ತಪ್ಪಿಲ್ಲ. ನಮಗೆ ಯಾರಿಗೂ ತೊಂದರೆ ನೀಡುವ ಇಚ್ಛೆ ಇಲ್ಲ. ಸರಿಯಾಗಿ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಹಣ ಸಿಗಬೇಕು ಎಂಬುದು ನಮ್ಮ ಉದ್ದೇಶ.
ಕೆಲವು ಗುತ್ತಿಗೆದಾರರು ನಮ್ಮ ಮೇಲೆ ಪ್ರೀತಿ ಅಭಿಮಾನ ತೋರಿಸುತ್ತಿದ್ದಾರೆ. ಅದನ್ನು ಬ್ಲ್ಯಾಕ್ ಮೇಲ್ ಎನ್ನುವುದಿಲ್ಲ. ನಮಗೆ ಅನೇಕ ವರದಿಗಳು ಬಂದಿದ್ದು, ಅವುಗಳ ನೈಜತೆ ಪರಿಶೀಲನೆ ಮಾಡುತ್ತಿದ್ದೇವೆ. ಯಾರು ಸರಿಯಾಗಿ ಕೆಲಸ ಮಾಡಿದ್ದಾರೋ ಅವರಿಗೆ ಹಣ ಕೊಡಲು ನಾವು ಬದ್ಧರಾಗಿದ್ದೇವೆ. ಈ ವಿಚಾರವಾಗಿ ನಾನು ಖಾಲಿ ಮಾತನಾಡುವುದಿಲ್ಲ. ಈ ಬಗ್ಗೆ ಪ್ರತ್ಯೇಕವಾಗಿ ಮಾಧ್ಯಮಗಳ ಮುಂದೆ ದಾಖಲೆಗಳ ಸಮೇತ ಮಾತನಾಡುತ್ತೇನೆ.”
ಪ್ರಶ್ನೋತ್ತರ:
ಟನಲ್ ರಸ್ತೆ ಹಾಗೂ ಮೇಲ್ಸೆತುವೆ ರಸ್ತೆಗಳು ಹೆಚ್ಚಾದರೆ ಕಾರುಗಳ ಬಳಕೆಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಆಗ ಸಂಚಾರ ದಟ್ಟಣೆ ನಿಯಂತ್ರಣ ಹೇಗೆ ಸಾಧ್ಯ ಎಎಂಬ ಪ್ರಶ್ನೆಗೆ “ನಾವು ಜನರ ಸಮಯ ಉಳಿಸಲು ಅವಕಾಶ ಮಾಡಿಕೊಡುವತ್ತ ಗಮನಹರಿಸುತ್ತಿದ್ದೇವೆ. ಜನರಿಗೆ ಕಾರು ತೆಗೆದುಕೊಳ್ಳಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಸಿಂಗಾಪುರದಂತೆ ಹೆಚ್ಚಿನ ತೆರಿಗೆ ಹಾಕಿ ಹೆಚ್ಚು ಕಾರು ಖರೀದಿ ಮಾಡದಂತೆ ನಿಯಂತ್ರಣ ಹೇರಲು ಸಾಧ್ಯವಿಲ್ಲ. ಇದು ಸ್ವತಂತ್ರ ದೇಶ. ಇಲ್ಲಿ ಯಾರು ಬೇಕಾದರೂ ಕಾರು ಖರೀದಿಸಬಹುದು. ಇನ್ನು ನಗರದ ಒಳಗಿನ ರಸ್ತೆಗಳ ಅಗಲೀಕರಣವೂ ಅಸಾಧ್ಯ. ಹೀಗಾಗಿ ಅನೇಕ ಯೋಜನೆ ರೂಪಿಸುತ್ತಿದ್ದೇವೆ” ಎಂದು ಉತ್ತರಿಸಿದರು.
ಗುತ್ತಿಗೆದಾರರು ತಮ್ಮ ಬಿಲ್ ಪಾವತಿಸಬೇಕು ಅಥವಾ ನಮಗೆ ದಯಾಮರಣ ನೀಡಬೇಕು ಎಂದು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ಇದು ‘ನನ್ನ ಸ್ನೇಹಿತರ’ ರಾಜಕೀಯ ಪ್ರೇರಿತ ಯೋಜನೆ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂದು ನಮಗೆ ಗೊತ್ತಿದೆ. ಅವರಿಗೆ ನಾನು ಶುಭಕೋರುತ್ತೇನೆ. ಜನ ನಮ್ಮ ಮೇಲೆ ನಂಬಿಕೆ ಇಟ್ಟು ಭಾರಿ ಬಹುಮತ ಕೊಟ್ಟಿದ್ದಾರೆ. ಹೀಗಾಗಿ ನಾವು ಭ್ರಷ್ಟಾಚಾರ ತಡೆಯಬೇಕಿದೆ. ಲೋಕಾಯುಕ್ತ ಸಂಸ್ಥೆ ಅನೇಕ ಪ್ರಕರಣಗಳಲ್ಲಿ ಕಾಮಗಾರಿ ಆಗದೇ ಬಿಲ್ ಪಾವತಿ ಮಾಡಲಾಗಿರುವ ಬಗ್ಗೆ ವರದಿ ನೀಡಿದೆ. ಈ ವಿಚಾರವನ್ನು ಮಾಜಿ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದರು. ಹೀಗಾಗಿ ನಾವು ಇದನ್ನು ಪರಿಶೀಲನೆ ಮಾಡುತ್ತೇವೆ. ಸರಿಯಾದ ರೀತಿಯಲ್ಲಿ ಕೆಲಸ ಮಾಡಿರುವ ಗುತ್ತಿಗೆದಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ” ಎಂದು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw