ಇನ್ ಸ್ಟ್ರಾಗ್ರಾಂನಲ್ಲಿ ಪೊಲೀಸ್ ಎಂದು ಪರಿಚಯಿಸಿಕೊಂಡು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ: ನಕಲಿ ಪೊಲೀಸ್ ಅರೆಸ್ಟ್ - Mahanayaka
7:10 PM Thursday 12 - December 2024

ಇನ್ ಸ್ಟ್ರಾಗ್ರಾಂನಲ್ಲಿ ಪೊಲೀಸ್ ಎಂದು ಪರಿಚಯಿಸಿಕೊಂಡು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ: ನಕಲಿ ಪೊಲೀಸ್ ಅರೆಸ್ಟ್

crime news
10/08/2023

ಇನ್ ಸ್ಟ್ರಾಗ್ರಾಂ ಮೂಲಕ ಪರಿಚಯಗೊಂಡಿದ್ದ ವಿದ್ಯಾರ್ಥಿನಿಯ ಮನೆಯವರಿಗೆ ತಾನು ಪೊಲೀಸ್ ಎಂದು ಪರಿಚಯಿಸಿ ಕೆಲಸ ಕೊಡಿಸುವುದಾಗಿ ಹೇಳಿದ್ದಲ್ಲದೇ ಲಾಡ್ಜ್‌ ಗೆ ಕರೆದೊಯ್ದು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಆಕೆಯೊಂದಿಗಿರುವ ಫೊಟೋಗಳನ್ನು ಇತರರಿಗೆ ಶೇರ್ ಮಾಡಿ ಆ ಫೊಟೋಗಳನ್ನು ಡಿಲೀಟ್ ಮಾಡಬೇಕಿದ್ರೆ ಹಣದ ಬೇಡಿಕೆಯನ್ನು ಮುಂದಿಟ್ಟ ನಕಲಿ ಪೊಲೀಸ್ ನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರಾಯಚೂರು ಮೂಲದ ಯಮನೂರ (22) ಎಂದು ಗುರುತಿಸಲಾಗಿದೆ. ಆರೋಪಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಂಗಳೂರು ನಗರದ ಇಂಜಿನಿಯರಿಂಗ್ ಕಾಲೇಜಿನ 19ರ ಹರೆಯದ ವಿದ್ಯಾರ್ಥಿನಿಯನ್ನು ಇನ್ಸ್ಟಾಗ್ರಾಮ್ ಮೂಲಕ ಗೆಳೆತನ ಮಾಡಿ ಕೊಂಡ ಆರೋಪಿಯು ತನ್ನನ್ನು ವಾಮಂಜೂರು ಠಾಣೆಯ ಎಸ್ಸೈ ಎಂದು ಪರಿಚಯ ಮಾಡಿಕೊಂಡ. ಅಲ್ಲದೇ 2023ರ ಮೇ ತಿಂಗಳಲ್ಲಿ ನಗರದ ಕದ್ರಿ ದೇವಸ್ಥಾನದಲ್ಲಿ ಭೇಟಿ ಮಾಡಿ ಬಳಿಕ ತಣ್ಣೀರುಬಾವಿಯ ಬೀಚ್‌ಗೆ ಕರೆದೊಯ್ದು ಫೋಟೊ ತೆಗೆದುಕೊಂಡು ಬಳಿಕ ಅದನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದ ಎಂದು ಆರೋಪಿಸಲಾಗಿದೆ.

ಅಲ್ಲದೆ ಬೆಂಗಳೂರು ಮತ್ತು ಕಿನ್ನಿಗೋಳಿಯ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಲ್ಲದೆ ಆ ಫೋಟೊಗಳನ್ನು ಆಕೆಯ ಮನೆಯವರಿಗೆ ಮತ್ತು ಸ್ನೇಹಿತರ ಮೊಬೈಲ್‌ಗೆ ಕಳುಹಿಸಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಈ ಫೋಟೊಗಳನ್ನು ಅಳಿಸಿ ಹಾಕಬೇಕಿದ್ದರೆ 1.50 ಲಕ್ಷ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿನಿಯು ಪೊಲೀಸರಿಗೆ ದೂರು ನೀಡಿದ ಕಾರಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ