ಪಬ್ಜಿಗೆ 16 ವರ್ಷದ ಬಾಲಕ ಬಲಿ | ಬ್ಯಾನ್ ಆದರೂ ನಿಲ್ಲದ ಪಬ್ಜಿ ಓಟ
ಚೆನ್ನೈ: ಪಬ್ಜಿಗೆ ಬಾಲಕನೋರ್ವ ಬಲಿಯಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರಿನ ಭಾರತಿದಾಸನ್ ನಗರದಲ್ಲಿ ನಡೆದಿದ್ದು, ತಾಯಿಯ ಸೀರೆಯಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಐಟಿಐ ಪ್ರಥಮ ವರ್ಷ ವಿದ್ಯಾರ್ಥಿ 16 ವರ್ಷದ ರವಿ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಆನ್ ಲೈನ್ ತರಗತಿಗಾಗಿ ತಾಯಿ ಜಯಲಕ್ಷ್ಮೀ ಮತ್ತು ಅಣ್ಣ ವಿಶ್ವ ಈತನಿಗೆ ಮೊಬೈಲ್ ಖರೀದಿಸಿ ನೀಡಿದ್ದರು. ಆದರೆ ಈತ ಯಾವಾಗಲೂ ಪಬ್ಜಿ ಆಟದಲ್ಲಿಯೇ ನಿರತನಾಗಿದ್ದ ಎಂದು ಹೇಳಲಾಗಿದೆ.
ಪಬ್ಜಿ ಆಟ ಆಡುವಾಗ ಗೆಳೆಯರು ಅವಮಾನ ಮಾಡಿದರು ಎಂದು ನೊಂದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ವರ್ಷದ ಹಿಂದೆಯಷ್ಟೆ ರವಿಯ ತಂದೆ ನಿಧನರಾಗಿದ್ದರು. ಇದೀಗ ಪುತ್ರನೂ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ.
ತಾಯಿ ಜಯಲಕ್ಷ್ಮೀ ಗಾರೆ ಕೆಲಸ ಮಾಡಿಕೊಂಡು ಮಗನನ್ನು ಓದಿಸುತ್ತಿದ್ದರು. ನಿನ್ನೆ ಕೆಲಸ ಮುಗಿಸಿ ಮನೆಗೆ ಬಂದು ಬಾಗಿಲು ಬಡಿದಾಗ ಪುತ್ರ ಬಾಗಿಲು ತೆರೆಯಲಿಲ್ಲ. ಮತ್ತೆ ಮತ್ತೆ ಬಾಗಿಲು ಬಡಿದರೂ ಪುತ್ರ ಬರಲೇ ಇಲ್ಲ. ಇದರಿಂದ ಅನುಮಾನಗೊಂಡ ತಾಯಿ ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಮನೆಗೆ ಪ್ರವೇಶಿಸಿದ್ದು, ಈ ವೇಳೆ ಪುತ್ರ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ.
ಪಬ್ಜಿ ಬ್ಯಾನ್ ಆಗಿದ್ದರೂ ಅದನ್ನು ಬೇರೆ ರೀತಿಯಲ್ಲಿ ಡೌನ್ ಲೋಡ್ ಮಾಡಿಕೊಂಡು ಯುವಕರು ಈಗಲೂ ಆಡುತ್ತಿದ್ದಾರೆ. ಮಕ್ಕಳು ಚೆನ್ನಾಗಿ ಓದಲಿ ಎಂದು ಪೋಷಕರು ಕಷ್ಟಪಟ್ಟು ಮೊಬೈಲ್ ನೀಡಿದರೆ, ಮಕ್ಕಳು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪೋಷಕರನ್ನು ಆತಂಕಕ್ಕೆ ದೂಡಿದೆ.