ರಿಯಲ್ ಸ್ಟಾರ್ ನ ಮನದಾಳದ ರಿಯಲ್ ಮಾತು - Mahanayaka
11:10 PM Wednesday 11 - December 2024

ರಿಯಲ್ ಸ್ಟಾರ್ ನ ಮನದಾಳದ ರಿಯಲ್ ಮಾತು

upendra
14/08/2023

  • ಧಮ್ಮಪ್ರಿಯಾ, ಬೆಂಗಳೂರು  

ಸಮ ಸಮಾಜವನ್ನು ಬಯಸುವ ಓದುಗ ಮಿತ್ರರೇ,  ನಮ್ಮದು  ಜ್ಯಾತ್ಯಾತೀತ ರಾಷ್ಟ್ರ, ನಾವೆಲ್ಲರೂ ಒಂದು ,  ನಾವೆಲ್ಲಾ ಅಣ್ಣತಮಂದಿರಂತೆ ಬದುಕುತ್ತಿದ್ದೇವೆ ಎನ್ನುವ ಮಾತುಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.  5 ವರ್ಷಗಳಿಗೊಮ್ಮೆ  ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಇಂತಹ  ಡೊಂಗಿ ಮಾತುಗಳಿಗೆ ಹೇಳಿಕೆಗಳಿಗೇನು ಕಮ್ಮಿಯಿಲ್ಲ,  ನಮ್ಮ ಪುಂಗಿದಾಸರ ಬಾಯಿಯಲ್ಲಿ ಸದಾ ಇಂತಹ ಮಾತುಗಳು ಬರುತ್ತಲೇ ಇರುತ್ತವೆ. ನಾವು ಒಮ್ಮೊಮ್ಮೆ ಅಜ್ಞಾನಿಗಳಂತೆ ಕುಳಿತು ಭಾಷಣ ಕೇಳುತ್ತಾ ಚಪ್ಪಾಳೆ ತಟ್ಟಿ ಸಿಳ್ಳೆ ಹೊಡೆದು  ಖುಷಿಪಡುತ್ತಿರುತ್ತೇವೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು  75 ವರ್ಷಗಳ ಕಳೆದು  “ಅಜಾದ್ ಕ ಅಮೃತ್ ಮಹೋತ್ಸವ್” ಎನ್ನುತ್ತಿದ್ದರು  ಇಂದಿಗೂ  ದಲಿತರ ಕಗ್ಗೊಲೆ ,  ದಲಿತ ಹೆಣ್ಣುಮಕ್ಕಳ  ಅತ್ಯಾಚಾರ ,  ದೇವಾಲಯಕ್ಕೆ ಪ್ರವೇಶ ನಿರಾಕರಣೆ,  ದೇವಾಲಯ ಪ್ರವೇಶಿಸಿದ್ದಕ್ಕೆ ದಲಿತರಿಂದ ದಂಡ ವಸೂಲಿ, ದಲಿತ ಹುಡುಗ  ಹೊಸ ಬೈಕ್ ಕೊಂಡುಕೊಂಡು ಊರಲ್ಲಿ ಬಂದಿದ್ದಕ್ಕೆ  ಬೈಕಿಗೆ ಬೆಂಕಿ,  ದಲಿತ ಹುಡುಗ  ಅನ್ಯಜಾತಿಯ ಹುಡುಗಿಯನ್ನು ಪ್ರೀತಿಸಿದ್ದಕ್ಕೆ  ಇಡೀ ಮನೆಮಂದಿಗೆಲ್ಲಾ ಮೂತ್ರ ಕುಡಿಸಿದ್ದು, ಯಾರಿಗೂ ಅರ್ಥವಾಗುತ್ತಿಲ್ಲವೇ ? ನಮ್ಮದು  ಮುಂದುವರೆಯುತ್ತಿರುವ ದೇಶವೆಂದು  ಬೊಬ್ಬೆಯಿಡುವ ಜನರಿಗೆ ಇವುಗಳು  ಅರ್ಥವಾಗಬೇಕಿದೆ.  ಈ ದೇಶದಲ್ಲಿ  ಜನ ಸಾಮಾನ್ಯರು  ಹಾಸ್ಪಿಟಲ್ ಗೆ ಹೋದಾಗ ಅಲ್ಲೇ ಸತ್ತರೆ  ಸತ್ತ ನಂತರ ಹೆಣ ಸಾಗಿಸಲು ವಾಹನವಿಲ್ಲದೆ, ಹೆಗಲಮೇಲೆ ಹೆಣ ತೆಗೆದುಕೊಂಡು,  ಕಾಲು ನಡಿಗೆಯಲ್ಲಿ ನಡೆದು ಹೋಗುತ್ತಿರುವ ಬಡತನದ ಪರಿಸ್ಥಿತಿ ಯಾರಿಗೂ ಅರ್ಥವಾಗಿತ್ತಿಲ್ಲವೇ ? ಆದರೂ ನಾವು ಚಂದ್ರಯಾನದ ಅಂಗಳಕ್ಕೆ ಕಾಲಿಟ್ಟಿದ್ದೇವೆ ಎನ್ನುವ ಸಂಭ್ರಮದಲ್ಲಿದ್ದೇವೆ. ಇದು ಈ ದೇಶದ ಸಾಧನೆ ಎನ್ನಬಹುದೋ  ಅಥವಾ ಈ ದೇಶದ  ದುರಂತ ಕಥೆ ಎನ್ನಬಹುದೋ ಒಂದು ಅರ್ಥವಾಗದಾಗಿದೆ. ಇವುಗಳನ್ನು  ದಲಿತರ, ಬಡವರ  ದೌರ್ಭಾಗ್ಯ ಎನ್ನಬೇಕೇ ? ಹೆಣ್ಣುಮಕ್ಕಳ ಅಸಹಾಯಕ ಸ್ಥಿತಿ ಎಂದು ಕರೆಯಬೇಕೆ ? ರೈತರ ಆತ್ಮಹತ್ಯೆಗೆ ರೈತರೇ ಕಾರಣ ಎನ್ನಬೇಕೇ ? ನಿಮ್ನ ಜಾತೀಯಲ್ಲಿ ಹುಟ್ಟಿದ್ದೇ ತಪ್ಪು ಎನ್ನಬೇಕೇ ?  ಪ್ರಜ್ಞಾವಂತರಾದವರು ಯೋಚಿಸಬೇಕಾಗಿದೆ.

ಇಂತಹ ಸಾಮಾನ್ಯ ವಿಚಾರಗಳು,ಇಡೀ ಸಮಾಜಕ್ಕೆ  ಒಳ್ಳೆಯದನ್ನು ಬಯಸುವ  ನಮ್ಮ ರಿಯಲ್ ಸ್ಟಾರ್  ಗೆ ಏಕೆ ಅರ್ಥವಾಗುತ್ತಿಲ್ಲಾ ? ಅಥವಾ ಇದು ನಮ್ಮ ರಿಯಲ್ ಸ್ಟಾರ್ ರವರ ರಿಯಲ್ ಮನಸ್ಥಿತಿಯೇ ?  ಇವೆಲ್ಲವನ್ನು ನಮ್ಮ ಸಮ ಸಮಾಜದ ಜನಸಾಮಾನ್ಯರು ಚಿಂತಿಸಬೇಕಾಗಿದೆ.  ಇತ್ತೀಚೆಗೆ  ನಮ್ಮ  ರಿಯಲ್ ಸ್ಟಾರ್ ರವರು  ಬಹಳ  ಕೇವಲವಾಗಿ ಒಂದು ಜಾತಿಯನ್ನು ಕುರಿತು ಮಾತನಾಡಿರುವುದನ್ನು ನಾವು  ಸಾಮಾಜಿಕ ಜಾಲ ತಾಣದಲ್ಲಿ ಗಮನಿಸಿದ್ದೇವೆ. ಅಪಾರವಾದ  ಸಾಮಾಜಿಕ ಕಳಕಳಿಯಿರುವವರು,  ಸಮಾಜದಲ್ಲಿ ಘನತೆಯಿಂದ ಬದುಕುತ್ತಿರುವವರು,  ಪ್ರಜೆಗಳಿಗಾಗಿ ಪ್ರಜಕೀಯ ಮಾಡಲು  ಸಿದ್ಧವಿರುವ ನಮ್ಮ ರಿಯಲ್ ಸ್ಟಾರ್ ಗೆ  ಇನ್ನೊಂದು ಜಾತಿಯ ಬಗ್ಗೆ ಕೇವಲವಾಗಿ ಮಾತನಾಡಬಾರದು ಎನ್ನುವಷ್ಟು ಪರಿಜ್ಞಾನ ಇಲ್ಲವಾಯಿತೇ ಎನ್ನುವುದು  ಬಹಳ ನೋವಿನ ಸಂಗತಿಯಾಗಿದೆ.

ಸಮಾಜವನ್ನು ತಿದ್ದಲು ಹೊರಟ ಜ್ಞಾನಿಗಳ ಬಾಯಿಯಲ್ಲಿ ಇಂತಹ ಮಾತುಗಳು ಬರುವುದು ಸರಿಯೇ,  ಅಥವಾ ಈ ರಿಯಲ್ ಸ್ಟಾರ್ ರವರ ಮನದಾಳದ ಮಾತಿಗೆ ನಾಲಿಗೆಯಲ್ಲಿ ಫಿಲ್ಟರ್ ಸಡಿಲವಾಯಿತೇ ?   ಪ್ರಚಾರಕ್ಕಾಗಿ  ಯಾರು ಮಾತನಾಡಬಾರದು ಎನ್ನುವ ನಮ್ಮ ಸ್ಟಾರ್, ಇವರು ಮಾತನಾಡಿದ್ದಾದರೂ ಯಾಕೆ ? ಈ ದೇಶದಲ್ಲಿ 35  ಕೋಟಿಗೂ  ಹೆಚ್ಚಾಗಿ ಇರುವ ದಲಿತರ, ಶೋಷಿತರ ಭಾವನೆಗಳಿಗೆ ದಕ್ಕೆ ತರುವ ಮಾತುಗಳನ್ನಾಡಿದ್ದಾದರು  ಏಕೆ  ಎನ್ನುವುದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಿದೆ. ಜಾತಿಯ ಬಗ್ಗೆ ನಿಮಗೆ ಇಷ್ಟು  ಕೆಟ್ಟ ಮನಸ್ಥಿತಿ ಇದೆ ಎನ್ನುವುದಾದರೆ ಜನಸಾಮಾನ್ಯರ ದೃಷ್ಠಿಯಲ್ಲಿ ನೀವು ಇನ್ನು ಮುಂದೆ ಜಾತೀವಾದಿಗಳಾಗಿಯೇ ಕಾಣುತ್ತೀರಲ್ಲವೇ ?

ಇಂತಹ ಮಾತುಗಳು ಈ ಸಮಾಜದಲ್ಲಿ ಸದಾ  ಮರುಕಳಿಸುತ್ತಲೇ ಇರುತ್ತವೆ. ಸ್ನೇಹಿತರ ಮನೆಯ ವರಾಂಡದಲ್ಲಿ ಕುಳಿತಿರಬೇಕಾದರೆ ಅಲ್ಲಿಗೆ ಬಂದ ಸವರ್ಣೀಯರ  ಗುಂಪೊಂದು ದೇವರ ಉತ್ಸವಕ್ಕೆ  ಚಂದಾ ಕೇಳುತ್ತಿದ್ದರು. ನನ್ನ ಸ್ನೇಹಿತರು  ಚಂದಾ ಕೊಡಲು ಒಪ್ಪಿಕೊಂಡರು.ಯಾರ ಬಳಿಯೂ ಗದ್ದಲ ಮಾಡಿಕೊಳ್ಳಬೇಡಿ.  ಗಲಾಟೆಗೆ ಅವಕಾಶ ಕೊಡಬೇಡಿ ಎಂದರು. ತಕ್ಷಣವೇ ಊರಿನ ಹಿರಿ ತಲೆಮಾರಿನ ವ್ಯಕ್ತಿ  ಅದೆಲ್ಲದಕ್ಕೆ ಅವಕಾಶವೇ ಇಲ್ಲಾ. ಒಂದು ವೇಳೆ ಇದ್ದರು ಸಣ್ಣ ಪುಟ್ಟವುಗಳಿಗೆಲ್ಲಾ ತಲೆ ಕೆಡಿಸಿಕೊಂಡರೆ ಕೆಲಸವಾಗುವುದಿಲ್ಲ ಎಂದು ಹೇಳುತ್ತಾ  “ಊರು ಅಂದ ಮೇಲೆ *** ಇದ್ದೇ ಇರುತ್ತೆ” ನಾವು ನಮ್ಮ ಕೆಲಸ ಮಾಡಬೇಕು ಅಷ್ಟೇ ಅಂತೇಳಿ ಮಾತು ಮುಗಿಸಿ ಹೊರಟರು.  ಏನಿದು ಇನ್ನು ಈ ರೀತಿಯ ಮಾತುಗಳಿವೆಯಾ ಎಂದು ಆಶ್ಚರ್ಯವಾಯಿತು. ಯಾಕೆ ಕೆಲವು ಜಾತಿಗಳೇ ಬೈಗುಳಗಳ ವಸ್ತುವಾಗಿವೆ. ಹಾಗಾದರೆ ಶ್ರೇಷ್ಠತೆ ಎನ್ನುವುದು ಯಾವ ಜಾತಿಯನ್ನು ಆಯ್ಕೆ ಮಾಡಿಕೊಂಡಿದೆ.  ಎಂದು ಚಿಂತಿಸುತ್ತಾ,  ಯಾವುದು ಶ್ರೇಷ್ಠ ? ಮತ್ಯಾವುದು ಕನಿಷ್ಠ ?  ಯಾರೂ ಇದಕ್ಕೆ ಕಾರಣೀಭೂತರು ? ಎಂದೆಲ್ಲಾ ಚಿಂತಿಸತೊಡಗಿದೆ.

“ಊರೆಂದರೆ *** ಇದ್ದೇ ಇರುತ್ತದೆ” ಈ ಸಾಮಾನ್ಯ ನುಡಿಯ ಹಿಂದಿರುವ ಭಾವ ಯಾವುದು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ, ಜೊತೆಗೆ  ಹೊಲಸು ತಿನ್ನುವವನೇ *** ಎನ್ನುವ ಮಾತುಗಳನ್ನೆಲ್ಲಾ  ಆಧುನಿಕ  ಭಾರತದಲ್ಲಿ ಈ ನುಡಿಗಳನ್ನು   ಸಾಮಾನ್ಯಕರಿಸಲಾಗಿದೆ. ಇದು  ಯಾವ ಜನಾಂಗದ ಹೀಯಾಳಿಕೆಯಲ್ಲಾ ಎನ್ನುವಷ್ಟರ ಮಟ್ಟಿಗೆ ಒಂದು ಜಾತಿಯನ್ನು ಕೀಳಾಗಿ ಕಾಣುವಂತೆ  ಮಾತನಾಡಲಾಗುತ್ತಿದೆ. ಇದರ ಹಿಂದಿರುವ ಮರ್ಮ ಏನು  ಎಂಬುದನ್ನು  ವಿಚಾರವೆಂಬ ಓರೆಗಲ್ಲಿಗೆ  ಹಚ್ಚಿ, ತರ್ಕಕ್ಕೆ ಒಳಪಡಿಸಿ ಇಂತಹ ಮಾತುಗಳನ್ನು ಬಳಸಕೇಕಾ ಅಥವಾ  ಕುಲೀನ ಮನಸ್ಥಿತಿಯಿಂದ ಹೊರಗಡೆ ಬರಬೇಕಾ ? ಎಂದು  ತೀರ್ಮಾನಿಸಬೇಕಾಗಿದೆ. ಇಂದು ಆಧುನಿಕ ಸಮಾಜದಲ್ಲಿ  ಬೈಗುಳಗಳು ಸಹ ತಳ ಸಮುದಾಯಗಳನ್ನು ಕೇಂದ್ರೀಕರಿಸಿ ಬೈಯ್ಯಲಾಗುತ್ತಿದೆ.  ಹಾಸ್ಯಗಳಾಗಿ ಧಾರ್ಮಿಕ ಅಲ್ಪ ಸಂಖ್ಯಾತರನ್ನು  ಗೇಲಿ ಮಾಡಲಾಗುತ್ತಿದೆ.

ಒಂದು ಜಾತಿಯನ್ನು ಅಥವಾ ಸಮುದಾಯಗಳನ್ನು ಹೀನಾಯವಾಗಿ  ಕಾಣಲು ಅದರ  ಹಿಂದಿರುವ ಸಾಂಸ್ಕೃತಿಕ, ವೈದಿಕ ಪರಂಪರೆಯ ಪಟ್ಟಭದ್ರಹಿತಾಶಕ್ತಿಗಳು  ಯಾವುವು  ಎನ್ನುವುದನ್ನು ಸಾಮಾನ್ಯ ಜನರಿಗೆ ತಿಳಿಸಬೇಕಾದ ಅನಿವಾರ್ಯತೆ  ನಮಗಿದೆ. ಆಧುನಿಕ ಭಾರತದ  ನಿಮ್ನವರ್ಗಗಳು (ಸವರ್ಣೀಯರು)  ತಮ್ಮ ಶ್ರೇಷ್ಠತೆಗಾಗಿ, ಹಲವಾರು ಜನಾಂಗವನ್ನು ಜಾತಿಯ  ಸಂಕೋಲೆಯಲ್ಲಿ ಸಿಲುಕಿಸಿರುವುದನ್ನು  ಇಂದಿಗೂ  ಸಮಾಜದೊಳಗೆ ನೋಡುತ್ತಿದ್ದೇವೆ.  ಜಾತಿಯ ಶ್ರೇಷ್ಠತೆ ಎಂಬುದು ಆಧುನಿಕ ಭಾರತದಲ್ಲಿ ಮಡಿವಂತರ  ಬದುಕಿನ ಮೂಲ ಮಂತ್ರವಾಗಿದೆ. ಹಾಗಾಗಿ  “ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ, ಜಾತಿ ವಿಜಾತಿಯೆನಬೇಡ ದೇವನೊಲಿದತಾನೇ ಜಾತ ಕಾಣ ಸರ್ವಜ್ಞ” ಎನ್ನುವ  ಸರ್ವಜ್ಞನ ಮಾತುಗಳನ್ನು  ಮಡಿವಂತರೆನಿಸಿಕೊಂಡವರಿಗೆ  ಅರ್ಥ ಮಾಡಿಸಬೇಕಿದೆ.

ಜಾತಿಯ ತಾರತಮ್ಯ, ಲಿಂಗ ತಾರತಮ್ಯ, ಕಸುಬುಗಳ ಮೇಲಿನ ತಾರತಮ್ಯ,  ಊಟದ ವ್ಯವಸ್ಥೆಯ ಮೇಲಿನ ಮಡಿವಂತರ ಅವಹೇಳನ, ವೈದಿಕ ಪರಂಪರೆಯ ತಾತ್ಸಾರದ ತಾರತಮ್ಯಗಳು ಜನರನ್ನು ದಿಕ್ಕು ತಪ್ಪಿಸಿವೆ. ಇದರಿಂದ  ಕಂಗಾಲಾದವರಿಗೆ ಬಸವಣ್ಣನ ಶರಣ ಚಳುವಳಿ ಒಂದು ರೀತಿಯಲ್ಲಿ ಶ್ರೇಷ್ಠತೆಯ ಮನೋಭಾವವನ್ನು ತಂದು ಕಟ್ಟಿಕೊಟ್ಟಿದೆ.

ಬಸವಣ್ಣನವರು ನಾನು ಹೊಲೆಯರ ಮಾದಿಗರ ದಾಸಿಯರ ಸಂಗದಿಂದ ಹುಟ್ಟಿದವನೆಂದು ಹೇಳಿಕೊಳ್ಳುತ್ತಾರೆ

ಚೆನ್ನಯ್ಯನ ಮನೆಯ ದಾಸನ ಮಗನು,

ಕಕ್ಕಯ್ಯನ ಮನೆಯ ದಾಸಿಯ ಮಗಳು  

ಇವರಿಬ್ಬರು ಹೊಲದಲಿ ಬೇರಣಿಗೆ ಹೋಗಿ ಸಂಗವ ಮಾಡಿದರು

ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವನ ಸಾಕ್ಷಿಯಾಗಿ

ಪಂಪನ ಆದಿಯಾಗಿ ಮನುಷ್ಯರಲ್ಲಿ ಯಾವ ಶ್ರೇಷ್ಠತೆ ಕನಿಷ್ಠತೆಗಳಿಲ್ಲಾ  “ಮನುಷ್ಯ ಜಾತಿ ತಾನೊಂದೇ ವಲಂ” ಎನ್ನುತ್ತಾ  ಎಲ್ಲರೂ ಸಮಾಜದೊಳಗೆ ಸಮಾನರೇ  ಎಂದು ಸಾರಿದ್ದಾರೆ.ಆದರೆ ಆಧುನಿಕ ಭಾರತಕ್ಕೆ ಬಾಬಾಸಾಹೇಬರು ಕೊಟ್ಟ ಸಂವಿಧಾನ ಸರ್ವರಿಗೂ ಸಮಾನತೆಯನ್ನು ನೀಡಿತು. ಭಾರತದ ಕಾನೂನು ವ್ಯವಸ್ಥೆ ಸಮಾನತೆಯನ್ನು ಕಾಪಾಡಿವ ಮೂಲ ಆಯುಧವಾಗಿದೆ.ಆದರೂ ಹಳೆಯ ತಲೆಮಾರಿನ ಮೇಲ್ಜಾತಿಯ  ಜನರು ಇಂದಿಗೂ  ತಮ್ಮ ಹಳೆಯ ಕಂದಾಚಾರಗಳನ್ನು  ರೂಢಿಗತವಾಗಿಸಿದೊಂಡಿದ್ದು ನಿಮ್ನವರ್ಗಗಳನ್ನು  ಅಸ್ಪೃಶ್ಯರನ್ನು ಧಾರ್ಮಿಕ ಅಲ್ಪಸಂಖ್ಯಾತರನ್ನು  ಹೀಯಾಳಿಸಿ ಬೈಯ್ಯುತ್ತಿರುವ ,  ಹೀನಕೃತ್ಯಗಳ ಸಂದರ್ಭದಲ್ಲಿ  ಜಾತಿಯನ್ನು  ಸೇರಿಸಿ ಮೂದಲಿಸುತ್ತಿರುವುದು ಅಕ್ಷಮ್ಯ ಅಪರಾಧವಿದ್ದಂತೆ. ಇದನ್ನು ನಮ್ಮ  ರಿಯಲ್ ಸ್ಟಾರ್ ಕೂಡ ಅರ್ಥೈಸಿಕೊಳ್ಳಬೇಕಿದೆ.

ಜಾತಿಯನ್ನು, ಧರ್ಮವನ್ನು ಹುಟ್ಟುತ್ತಲೇ ಯಾರೂ  ಅಂಟಿಸಿಕೊಂಡು ಬಂದವರಲ್ಲ. ಕೆಳಜಾತಿಗಳಲ್ಲಿ ಹುಟ್ಟುವುದೇ ತಪ್ಪು ಎನ್ನುವುದಾದರೆ ಚಾತುರ್ವರ್ಣ ವ್ಯವಸ್ಥೆಯನ್ನು ಸೃಷ್ಠಿ ಮಾಡಿದ್ದೂ ತಪ್ಪಲ್ಲವೇ.?  ಮಾನವೀಯ ಮೌಲ್ಯಗಳನ್ನು ಮರೆತು ಊರಿನಿಂದ ಹೊರಗಡೆ ಇರಿಸಿದ್ದು ತಪ್ಪಲ್ಲವೇ ?, ಸಮಾಜದಲ್ಲಿನ ಅವಕಾಶಗಳಿಂದ  ವಂಚನೆ ಮಾಡಿದ್ದೂ ತಪ್ಪಲ್ಲವೇ.? “ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು” ಎಂದು ಬೊಬ್ಬೆಯಿಡುವವರಿಗೆ ನಿಮ್ನವರ್ಗಗಳಿಗಾದ ಅನ್ಯಾಯ ಏಕೆ ಕಾಣುತ್ತಿಲ್ಲಾ ?.  ಅನ್ಯಧರ್ಮೀಯರು ಮತಾಂಧರಾಗಿದ್ದಾರೆ ಎನ್ನುವ ಹಿಂದೂ ನಾಯಕರಿಗೆ  ಯಾಕೆ ಅಷ್ಟೊಂದು ತಳಮಳ. ಮತಾಂತರ ಎನ್ನುವುದು ಅವರ ಸ್ವ ಇಚ್ಛೆಯಲ್ಲವೇ ?. ಧರ್ಮದ ಹೆಸರಲ್ಲಿ ಸಾವಿರಾರು ವರ್ಷಗಳಿಂದ ಶೋಷಣೆಗೊಳಗಾದ ಜನರಿಗೆ ಮತಾಂತರ ಆಗಬಾರದು ಎನ್ನುವ  ಧರ್ಮದಲ್ಲಿ ಸಮಾನತೆಯಿಲ್ಲವೆಂದ ಮೇಲೆ ಅಂತಹವರು ಬೇರೆ ಧರ್ಮಕ್ಕೆ ಹೋದರೆ ನಿಮಗಾಗುವ ನೋವಾದರೂ ಏನು ? ಅಲ್ಲದೆ ಧರ್ಮದ ಪ್ರಕಾರ ಅವರು ಹೀನ ಕುಲದಲ್ಲಿ ಹುಟ್ಟಿದವರು ಹೀನ ಜಾತಿಯವರು ದೇವಾಲಯಗಳಿಗೆ ಪ್ರವೇಶವಿಲ್ಲಾ ಎಂದು ಹೇಳುವ  ಧರ್ಮವನ್ನು ಬಿಟ್ಟು ಹೋದರೆ ನಿಮ್ಮ ಧರ್ಮದ ಶ್ರೇಷ್ಠತೆಯನ್ನು ಕಾಪಾಡಿಕೊಂಡಂತೆ ಅಲ್ಲವೇ ?

ಇದನ್ನೇ ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರು  ಮಾಡಿದ್ದು  ಧರ್ಮದ ಮಡಿವಂತಿಕೆಯ ರೋಗದಲ್ಲಿ  ಸಿಲುಕಿದ  ನಿಮ್ನವರ್ಗಗಳು  ಇಲ್ಲಿವರೆವಿಗೂ ಅನುಭವಿಸಿದ್ದು ಸಾಕಾಗಿದೆ.  ಹಾಗಾಗಿ  “ನಾನು ಹಿಂದುವಾಗಿ ಹುಟ್ಟಿದ್ದೇನೆ ಆದರೆ ಹಿಂದುವಾಗಿ ಸಾಯಲಾರೆ ” ಎಂದು ಹೇಳುತ್ತಾ   ಲಕ್ಷಾಂತರ ಅನುಯಾಯಿಗಳೊಡನೆ  ಬೌದ್ಧ ಧರ್ಮ ವನ್ನು ಸ್ವೀಕರಿಸಿದರು. ಇದು  ಭಾರತೀಯ ಹಿಂದೂ ಸನಾತನಿಗಳಿಗೆ ಕೊಟ್ಟ ಬಹು ದೊಡ್ಡ  ಪೆಟ್ಟಾಯಿತು. ಶೋಷಿತ ಜನಾಂಗಗಳಿಗೆ ವಿಮೋಚನೆಯ ಹಾದಿ ಕಾಣತೊಡಗಿತು.

ಮುಟ್ಟಾದ ಒಲೆಯಲ್ಲಿ ಹುಟ್ಟಿಹುದು ಜಗವೆಲ್ಲಾ ಮುಟ್ಟಬೇಡೆಂದು ದೂರ ಸರಿವ ಆರುವ ತಾ ಹುಟ್ಟಿದಾದರೂ ಎಲ್ಲಿ ಸರ್ವಜ್ಞ.    ಜಾತಿಯಲ್ಲಿ ಹುಟ್ಟಿದ್ದು ಹೀನತೆಯಲ್ಲಾ , ಅದನ್ನು ಯಾರು ಆಚರಿಸುತ್ತಾರೋ ಅವರು ಹೀನರು, ಹೀನ ಕುಲದವರು,  ಕುಲೀನರು, ಕೀಳು ಜಾತಿಯಲ್ಲಿ ಹುಟ್ಟಿದ್ದೇವೆ ಎಂದು ಶೋಷಿತರು ಬದಲಾಗಬೇಕಾದ ಅಗತ್ಯವಿಲ್ಲಾ,  ಶೋಷಣೆ ಮಾಡುವ ಕುಲೀನರು ಮಾನಸಿಕವಾಗಿ ಬದಲಾಗಬೇಕಿದೆ. ಜಾತಿಯಾ ಮಾನಸಿಕ ಸಂಕೋಲೆಗಳಿಂದ ಕುಲೀನರು  ಹೊರಗಡೆ ಬರಬೇಕಾಗಿದೆ. ಶೋಷಿತರು ಎನ್ನುವ ಬದಲು  ಶೋಷಣೆ ಮಾಡುವವರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುವುದು ಸಮಾಜಕ್ಕೆ ಬಹಳ ಆರೋಗ್ಯಕರವಾಗಿದೆ..

ಇಂದಿನ ತಲೆಮಾರಿನ ಯುವಕರು ಜಾತಿಯ ಮಡಿವಂತಿಕೆಯಿಂದ,  ಧರ್ಮದ ಶ್ರೇಷ್ಠತೆಯಿಂದ,  ಆಡಂಭರದ ಆಚರಣೆಗಳಿಂದ,  ಸಂಪತ್ತಿನ ಅಸಮಾನ ಹಂಚಿಕೆಯಿಂದ, ತಮ್ಮ ತಮ್ಮ ಹೆಸರುಗಳ ಮುಂದೆ ತಮ್ಮ ಜಾತಿಯ ಹಣೆಪಟ್ಟಿಯಿಂದ,  ಹೊರಬಂದರೆ ಎಲ್ಲಾ ಜನಾಂಗವು ಸಮಾಜದೊಡನೆ ಸುಖವಾಗಿ ಬದುಕಬಹುದಾಗಿದೆ.  ಇನ್ನು ಎಷ್ಟು ವರ್ಷಗಳ ಕಾಲ  ಸ್ವತಂತ್ರ ಭಾರತದಲ್ಲಿ ಜಾತಿಗಳ ಆಚರಣೆಯಾಗಬೇಕು ?  ಧರ್ಮ ಧರ್ಮಗಳ  ನಡುವೆ  ಘರ್ಷಣೆ ಶೋಷಣೆಯಾಗಬೇಕು ? ದೇವರ ಹೆಸರಲ್ಲಿ  ದೇವಾಲಯ ಪ್ರವೇಶದ ನೆಪದಲ್ಲಿ  ಸಮಾಜದಲ್ಲಿ ಇನ್ನು ಎಷ್ಟು ಕೋಮು ಗಲಭೆಗಳು ನಡೆಯಬೇಕು ? ಭಾರತಕ್ಕೆ ಸ್ವತಂತ್ರ ಬಂದು  75 ವರ್ಷಗಳು  ಕಳೆದರು  ದೇವಾಲಯಗಳಿಗೆ  ಪ್ರವೇಶವಿಲ್ಲ. ದಲಿತ ಸಮುದಾಯದ ಹುಡುಗ ಮೆಲ್ ಜಾತಿ ಮನೆಯ ಮುಂದೆ ಬೈಕ್ ನಲ್ಲಿ ಹೋದನೆಂದು  ಶಿಕ್ಷೆ,  ದೇವರ ಕೋಲು ಮುಟ್ಟಿದ್ದಕ್ಕೆ 50 ಸಾವಿರ ದಂಡ,  ದೇಶದ ಕೆಲವು ಉನ್ನತ ಹುದ್ದೆಗಳಲ್ಲಿ  ದಲಿತ ಎನ್ನುವ ಕಾರಣಕ್ಕೆ  ಅವಕಾಶ ನೀಡದೆ ಅವರ ಜ್ಞಾನಕ್ಕೆ ಅಡೆತಡೆಯಾಗಿರುವುದು,  ಜಾತಿಯ ರೋಗವೆಂಬುದು ವೈಜ್ಞಾನಿಕ ಸಂಶೋಧನೆಯ ಬೆಳವಣಿಗೆಗೆ ಬಹುದೊಡ್ಡ  ತೊಡಕಾಗಿರುವುದು.  ಇವೆಲ್ಲವೂ ಜಾತಿಯ ನಡೆಗಳೇ ಹೊರತು. ಯಾವ ವೈಜ್ಞಾನಿಕ ಪದ್ದತಿಗಳಲ್ಲ.

ಜಾತಿ ಎಂಬುದು  ದೇಶದ ವಿಜ್ಞಾನದ ಬೆಳವಣಿಗೆಗೆ ಬಹುದೊಡ್ಡ ಅಡ್ಡಗೋಡೆಯಾಗಿದೆ ಎಂದರೆ ತಪ್ಪಾಗಲಾರದು.  ಯುವ ಬಂಧುಗಳೇ  ನೀವು ನಿಮ್ಮ ಜಾತಿಯ ಶ್ರೇಷ್ಠತೆಯ ರೂವಾರಿಗಳಾಗಬೇಡಿ. ಅದೊಂದು ರೋಗಗ್ರಸ್ಥ ವ್ಯವಸ್ಥೆ. ಸಮಾಜದೊಳಗೆ ಮತ್ತೆ ಮತ್ತೆ ಅವುಗಳು ಮರುಕಳಿಸುತ್ತಾ  ಒಂದು ಜಾತಿ ತನ್ನ ಶ್ರೇಷ್ಠತೆಯನ್ನು  ಕಾಪಾಡಿಕೊಳ್ಳಲು  ಮತ್ತೊಂದು ಜಾತಿಯನ್ನು ಹೀನಾಯವಾಗಿ ಕಾಣುವುದು, ಗೇಲಿ ಮಾಡುವುದು, ಶೋಷಣೆಗೆ ಒಳಪಡಿಸುವುದು,  ಸಾಮಾಜಿಕ ರಂಗದಲ್ಲಿ ಬೇರ್ಪಡಿಸುವುದು, ಇವುಗಳು ಸಮಾಜಕ್ಕೆ ಕಂಟಕಗಳೇ ಹೊರತು ಸಮಾಜಮುಖಿ ಚಿಂತನೆಗಳಲ್ಲಾ.

ಜಾಗೃತರಾಗಿ ಚಿಂತಿಸಿ ಒಂದಾಗಿ   

ಮತ ಮನುಜಮತವಾಗಬೇಕು,  

ಪಥ ವಿಶ್ವಪಥವಾಗಬೇಕು 

ಮಾನವ ವಿಶ್ವ ಮಾನವನಾಗಬೇಕು 

ಇತ್ತೀಚಿನ ಸುದ್ದಿ