ಪ್ರಕೃತಿ, ಮನುಷ್ಯ ಮತ್ತು ಸಮಾಜದ ನಡುವೆ ಶಾಂತಿ-ಸಹಕಾರ ಬಯಸುವ ಕವಿತೆಗಳು - Mahanayaka
1:06 AM Wednesday 11 - December 2024

ಪ್ರಕೃತಿ, ಮನುಷ್ಯ ಮತ್ತು ಸಮಾಜದ ನಡುವೆ ಶಾಂತಿ–ಸಹಕಾರ ಬಯಸುವ ಕವಿತೆಗಳು

iruve mattu gode book
15/08/2023

  • ಉದಂತ ಶಿವಕುಮಾರ್

ಯುವಕವಿ ಮತ್ತು ಕಥೆಗಾರರಾದ ಶಂಕರ್ ಸಿಹಿಮೊಗ್ಗೆ ಅವರು ಬರೆದಿರುವ “ಇರುವೆ ಮತ್ತು ಗೋಡೆ”  ಕವನ ಸಂಕಲನವನ್ನು ಓದಿದೆ. 2023ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರವನ್ನು ಈ ಕೃತಿಗೆ ನೀಡಲಾಗಿದೆ.

ಈ ಸಂಕಲನದಲ್ಲಿ ಒಟ್ಟು 40 ಕವಿತೆಗಳಿವೆ ಕವಿ ಶಂಕರ್ ಸಿಹಿಮೊಗ್ಗೆಯವರು ತಮ್ಮ ಕಾವ್ಯಗಳಲ್ಲಿ ತಮ್ಮದೇ ಶೈಲಿಯೊಂದನ್ನು ರೂಢಿಸಿಕೊಂಡಿರುವ ಬಗ್ಗೆ ಇಲ್ಲಿನ ಕವನಗಳನ್ನು ಓದುವಾಗ ಅರಿವಿಗೆ ಬರುತ್ತದೆ.

ಕವಿ ಶಂಕರ್ ಸಿಹಿಮೊಗ್ಗೆ ಅವರ ಕವಿತೆಗಳ ಬಗ್ಗೆ ಮಾತನಾಡುವುದಾದರೆ ಬದುಕಿನ ಚಲನಶೀಲತೆ ಮತ್ತು ಜಡತ್ವದ ಬಗ್ಗೆ ಇರುವೆ ಮತ್ತು ಗೋಡೆ ಕವಿತೆಯ ಮೂಲಕ ಒಂದಕ್ಕೊಂದು ಎಷ್ಟೊಂದು ಪೂರಕ ಎಂಬುದನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ನೀರು, ಗಾಳಿ, ಭೂಮಿ, ಬೆಂಕಿ ಇವುಗಳೆಲ್ಲ ಜಡತ್ವದಿಂದ ಕೂಡಿದ್ದರೂ ಜೀವಿಗಳ ಬದುಕಿನಲ್ಲಿ ಎಷ್ಟೊಂದು ಮುಖ್ಯವಾಗುತ್ತವೆ ಎಂಬುದು ವಿಸ್ಮಯವೇ ಸರಿ.  ಇದು ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.

ಗುರುವಾಗುವುದೆಂದರೆ ದ್ರೋಣನಾಗುವುದಲ್ಲ ತನ್ನವರಿಗೂ ತನ್ನವರಲ್ಲದವರಿಗೂ ಮಮತೆಯ ಬುದ್ದನಾಗುವುದು ಎಂದು ಹೇಳುವ ಮೂಲಕ ದ್ರೋಣನು ಗುರುದಕ್ಷಿಣೆಯಾಗಿ ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿ ಕೊಡುವಂತೆ ಕೇಳುವ ಅವತ್ತಿನ ಧ್ವನಿ ಇವತ್ತಿಗೂ ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಸಮಾಜ,  ರಾಜಕೀಯದಲ್ಲಿ ಬೃಹದಾಕಾರವಾಗಿ ಬೆಳೆದು ನಗುತಿದೆ ಎನ್ನುವ ವಾಸ್ತವ ಸಂಗತಿಯನ್ನು, ಕವಿ ದ್ರೋಣರ ನೆರಳು ಕವನದ ಮೂಲಕ ತಿಳಿಸಿರುವುದನ್ನು ನಾವು ಇಲ್ಲಿ ಕಾಣಬಹುದಾಗಿದೆ.

ದೇಶ-ದೇಶಗಳ ನಡುವೆ ನಡೆಯುವ ಅಂತರಾಷ್ಟ್ರೀಯ ಸಮಸ್ಯೆಗಳ ಪರಿಹಾರಕ್ಕೆ ಯುದ್ಧವೇ ಮುಖ್ಯ ಎನ್ನುವ ಈ ಸಂದರ್ಭದಲ್ಲಿ, ಗಾಂಧಿಯುದ್ಧವನ್ನು ಅನುಸರಿಸುವ ಮೂಲಕ ಸೌಹಾರ್ದತೆಯನ್ನು ಕಂಡುಕೊಳ್ಳುವ ಬಗ್ಗೆ ಅಂದರೆ ಪ್ರೀತಿ, ಅಹಿಂಸೆ, ಸತ್ಯಾಗ್ರಹ,ಅಸಹಕಾರ,ಕರುಣೆ, ಸಹನೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಯುದ್ಧ ಮತ್ತು ಗಾಂಧಿ ಕವಿತೆಯ ಮೂಲಕ ತಿಳಿಸುತ್ತಾ, ಯುದ್ಧದಿಂದ ಆಗುವ ಅನಾಹುತಗಳ ಬಗ್ಗೆ ಮುಂದುವರೆದು ಕವಿ ಯುದ್ಧ ಎನ್ನುವ ಕವಿತೆಯಲ್ಲಿ ಬಹಳ ಚೆನ್ನಾಗಿ ತಿಳಿಸಿದ್ದಾರೆ.

ಪ್ರಕೃತಿ ಮತ್ತು ಮಾನವ ಸಮಾಜದ ಸಂಬಂಧಗಳ ನಡುವೆ ಶಾಂತಿ, ಸಹಕಾರ ಹೊಂದಾಣಿಕೆಯ ಮೂಲಕ ಬದುಕನ್ನು ಕಟ್ಟಿಕೊಳ್ಳುವ ಹಾಗೂ ಅದನ್ನು ಚೈತನ್ಯವಾಗಿ ಚಲನಶೀಲವಾಗಿ ರೂಡಿಸಿಕೊಂಡು ಸಾಗುವ ಬಗ್ಗೆ ಕವಿ ಶಂಕರ್ ಸಿಹಿಮೊಗ್ಗೆ ಕಣಿವೆಯ ಹುಡುಗಿ ಮತ್ತು ಕುರಿಂಜಿ ಹೂ, ಮೀನು ಹಿಡಿಯುವ ಹುಡುಗ, ಸಾವಿರ ಕಣ್ಣಿನವಳು, ಯಾರು ಯಾರು ಈ ಕವಿತೆ, ತುಂಗೆಯ ದಡದಿ ನಿಂತಿಹ ಅನೂಹ್ಯ, ರೆಕ್ಕೆ ಮೂಡಿದ ನಕ್ಷತ್ರಗಳು ಮುಂತಾದ ಕವಿತೆಗಳ ಮೂಲಕ ಪ್ರಜ್ಞೆಯನ್ನು ಮೂಡಿಸುವ ರೀತಿಯಲ್ಲಿ ಕಟ್ಟಿಕೊಟ್ಟಿರುವುದು ಶ್ಲಾಘನೀಯವೇ ಸರಿ.

ಪಿ.ಲಂಕೇಶ್ ರವರ ಅವ್ವ ಕವಿತೆಯ ಮೂಲಕ ತಾಯಿಯ ಮಹತ್ವವನ್ನು ಅರಿತಿದ್ದ ನಮಗೆ ಕವಿ ಶಂಕರ್ ಸಿಹಿ ಮೊಗ್ಗೆಯವರು ಕಾಫಿ ತೋಟದಲ್ಲಿ ಅಮ್ಮ ಮತ್ತು ಅವ್ವ ಮತ್ತು ದುಡ್ಡಿನ ಚೀಲ ಕವಿತೆಗಳ ಮೂಲಕ ತಾಯಿಯ ಮಹತ್ವವನ್ನು ಆಕೆಯ ದುಡಿಮೆ, ಆಕೆಯ ಆರೈಕೆ ಹಾಗೂ ಸರೀಕರ ಎದುರು ಸಮನಾಗಿ ಬದುಕಬೇಕೆಂಬ ಅವಳ ಸ್ವಾಭಿಮಾನ ಆಕೆಯ ಸಂಕಟಗಳಲ್ಲಿ ಕಾಣುವ ಬಗ್ಗೆ ಕವಿ ಈ ಕವಿತೆಗಳಲ್ಲಿ ಬಹಳ ಚೆನ್ನಾಗಿ ತಿಳಿಸಿದ್ದಾರೆ.

ಓಹೋ ಸೈನಿಕನೇ ಮತ್ತು ನೀಲಿ ಗೋಡೆ ಕವಿತೆಗಳ ಮೂಲಕ ಸೈನಿಕನ ಮಹತ್ವ ಮತ್ತು ಅವನ ತ್ಯಾಗವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಅಲ್ಲದೆ ಸಮಾಜದಲ್ಲಿ ಶತ ಶತಮಾನಗಳಿಂದ ಮನುಷ್ಯ- ಮನುಷ್ಯರ ನಡುವೆ ಏರ್ಪಟ್ಟಿರುವ ಅಂತರವನ್ನು ತಪ್ಪಿಸಲು ನೆರಳಾದ ನೀಲಿ ಗೋಡೆ ಬಾಬಾ ಸಾಹೇಬರ ಕನಸು ಎಂಬುದನ್ನು ಕವಿ ಇಲ್ಲಿ ತೋರಿದ್ದಾರೆ.

ಮನುಷ್ಯರ ಮೋಹ ಸ್ವಾರ್ಥಗಳಿಂದ ಹೊರಬಂದು ತನ್ನೊಳಗೆ ಬದಲಾವಣೆ ತಂದುಕೊಳ್ಳುವ ಸಮಯ ಬಂದಿದೆ ಎಂಬುದನ್ನು,  “ಮೊಳಗುತಿದೆ ಸೈರನ್”ಎನ್ನುವ ಕವಿತೆಯ ಮೂಲಕ ಮಾರ್ಮಿಕವಾಗಿ ತಿಳಿಸಿದ್ದಾರೆ.  ಹದ್ದು, ದರ್ಶನ, ಪ್ರಮಾದ,  ಊರುತಿರುಗ, ಪಾತಾಳಗರಡಿ, ದೀಪದ ನೆರಳು ಮುಂತಾದ ಕವಿತೆಗಳು ಓದುಗನನ್ನು ಚಿಂತನೆಗೆ ಹಚ್ಚುತ್ತವೆ.

ಪರಿಶ್ರಮದಿಂದ ಇನ್ನಷ್ಟು ಕವಿತೆಗಳನ್ನು ಕಟ್ಟಿಕೊಡುವ ಸಾಮರ್ಥ್ಯ ಶಂಕರ್ ಸಿಹಿಮೂಗ್ಗೆ ಇರುವುದರಿಂದ ಮುಂದೆಯೂ ಕೂಡ ಕಾವ್ಯ ಲೋಕದಲ್ಲಿ ನಡೆಯಬಲ್ಲರು ಎನ್ನುವ ಆಸೆ ನನ್ನದಾಗಿದೆ.  ಇಲ್ಲಿನ ಬಹುಪಾಲು ಕವಿತೆಗಳು ಅತ್ಯಂತ ಪ್ರಾಮಾಣಿಕ ನೆಲೆಯಲ್ಲಿ ಮೂಡಿಬಂದಿರುವುದರಿಂದ ಓದಿಸಿಕೊಳ್ಳುತ್ತವೆ.

ಈ ದಿಶೆಯಲ್ಲಿ ಇನ್ನಷ್ಟು ಕವಿತೆಗಳನ್ನು ಮುಂದಿನ ದಿನಗಳಲ್ಲಿ ನಾವು ಓದುವಂತಾಗಲಿ ಎಂಬುದು ನಮ್ಮ ಅಭಿಲಾಷೆಯಾಗಿದೆ ಮುಂದಿನ ಕೃತಿಯ ನಿರೀಕ್ಷೆಯಲ್ಲಿ…

ಇತ್ತೀಚಿನ ಸುದ್ದಿ