ಮಹಿಳೆಯ ತಪ್ಪುಗ್ರಹಿಕೆ: ಅನ್ಯಾಯವಾಗಿ ಜೀವ ಕಳೆದುಕೊಂಡ ವ್ಯಕ್ತಿ

ಮುಂಬೈ ರೈಲು ನಿಲ್ದಾಣದಲ್ಲಿ ಅಮಾಯಕನೊಬ್ಬ ಅನ್ಯಾಯವಾಗಿ ಜೀವ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮುಂಬೈನ ಸಿಯಾನ್ ನಿಲ್ದಾಣದ ಪ್ಲ್ಯಾಟ್‌ಫಾರ್ಮ್‌ನಲ್ಲಿ ಈ ಘಟನೆ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಿನೇಶ್ ರಾಥೋಡ್ ಎಂಬುವವರು ಮೃತಪಟ್ಟಿದ್ದಾರೆ.
ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆಂದು ತಪ್ಪಾಗಿ ಗ್ರಹಿಸಿದ ಯುವತಿಯೊಬ್ಬಳು ದಿನೇಶ್ ಮೇಲೆ ಹಲ್ಲೆ ನಡೆಸಿದ್ದಾಳೆ.
ಯುವತಿಯ ಪತಿಯೂ ದಿನೇಶ್ ಮುಖಕ್ಕೆ ಬಾರಿಸಿದ್ದಾರೆ. ಆ ಯುವತಿಯ ಪತಿ ಹೊಡೆದ ರಭಸಕ್ಕೆ ನಿಯಂತ್ರಣ ಕಳೆದುಕೊಂಡ ದಿನೇಶ್ ರೈಲ್ವೇ ಹಳಿ ಮೇಲೆ ಬಿದ್ದಿದ್ದಾನೆ. ಆ ಹೊತ್ತಿಗೆ ರೈಲು ಕೂಡಾ ಬಂದಿದ್ದು, ಸ್ಥಳದಲ್ಲಿದ್ದವರು ರೈಲಿಗೆ ಸೂಚನೆಯನ್ನು ನೀಡಿದ್ದರಾದರೂ ರೈಲು ತೀರಾ ಸಮೀಪಕ್ಕೆ ಅದಾಗಲೇ ತಲುಪಿತ್ತು. ರೈಲ್ವೇ ಹಳಿ ಮೇಲಿದ್ದ ದಿನೇಶ್ ಮೇಲೆಯೇ ರೈಲು ಹರಿದಿದೆ.
ಆರೋಪಿ ದಂಪತಿಯನ್ನು ಅವಿನಾಶ್ ಮಾನೆ ಮತ್ತು ಆತನ ಪತ್ನಿ ಶೀತಲ್ ಮಾನೆ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ದಂಪತಿಯನ್ನು ಪೊಲೀಸರು ಬಂಧಿಸಲಾಗಿದೆ.