ಆಘಾತಕಾರಿ ಘಟನೆ: 9 ತಿಂಗಳ ಮಗುವಿಗೆ ಹಕ್ಕಿ ಜ್ವರ!

19/08/2023
ರಾಂಚಿ: ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆಯಾದ ಆಘಾತಕಾರಿ ಘಟನೆ ವರದಿಯಾಗಿದೆ.
ಜಾರ್ಖಂಡ್ ರಾಜ್ಯದಲ್ಲಿ 9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ ಎಂದು ಸರ್ಕಾರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ರಾಮಗಢ ಜಿಲ್ಲೆಯ ನಿವಾಸಿಯೊಬ್ಬರು ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗುವನ್ನು ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಿದ್ದರು.
ವೈದ್ಯರು, ಮಗುವಿನ ಮೂಗು ಮತ್ತು ಗಂಟಲಿನ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದ್ದರು. ವರದಿಯಲ್ಲಿ ಮಗುವಿಗೆ ಹಕ್ಕಿಜ್ವರ ದೃಢಪಟ್ಟಿದೆ ಎಂದು ಮಕ್ಕಳ ವಿಭಾಗದ ವೈದ್ಯ ಡಾ.ರಾಜೀವ್ ಮಿಶ್ರಾ ತಿಳಿಸಿದ್ದಾರೆ.
ಈ ಆಸ್ಪತ್ರೆಯಲ್ಲಿ ವರ್ಷದ ಮೊದಲ ಹಕ್ಕಿ ಜ್ವರ ಪ್ರಕರಣ ಇದಾಗಿದೆ. ಮಗುವನ್ನು ನಿಗಾ ಘಟಕದಲ್ಲಿ ಇರಿಸಲಾಗಿದ್ದು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.