ಮೃತ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಸರ್ಕಾರಿ ಅಧಿಕಾರಿಯನ್ನು ಅಮಾನತುಗೊಳಿಸಿದ ಅರವಿಂದ್ ಕೇಜ್ರಿವಾಲ್
ನವದೆಹಲಿ: ಮೃತ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ಹಲವು ತಿಂಗಳುಗಳ ಕಾಲ ಅತ್ಯಾಚಾರ ಎಸಗಿ, ಗರ್ಭಪಾತ ಮಾಡಿಸಿದ್ದ ಆರೋಪ ಎದುರಿಸುತ್ತಿರೋ, ಸರ್ಕಾರಿ ಅಧಿಕಾರಿಯನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಸಂತ್ರಸ್ತೆಯ ತಂದೆ 2020ರ ಅಕ್ಟೋಬರ್ 1ರಂದು ನಿಧನರಾಗಿದ್ದರು. ಅಂದಿನಿಂದ ಸಂತ್ರಸ್ತೆ ಆರೋಪಿ ದಿಲ್ಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮೋದಯ್ ಖಾಖಾ ಮತ್ತು ಅವನ ಕುಟುಂಬದೊಂದಿಗೆ ಅವರ ಮನೆಯಲ್ಲಿ ವಾಸಿಸುತ್ತಿದ್ದಳು.
ಈ ಸಂದರ್ಭದಲ್ಲಿ ಆರೋಪಿಯು ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದನು. ಇದರ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಈ ವೇಳೆ ಅಧಿಕಾರಿಯ ಪತ್ನಿ ಬಾಲಕಿಗೆ ಗರ್ಭಪಾತವಾಗುವ ಔಷಧಿ ನೀಡಿ ಗರ್ಭಪಾತ ಮಾಡಿಸಿದ್ದಳು.
ಕೆಲವು ತಿಂಗಳ ಹಿಂದೆ ಮಾನಸಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಆಸ್ಪತ್ರೆಯೊಂದರಲ್ಲಿ ಸಮಾಲೋಚನೆ ನಡೆಸುತ್ತಿದ್ದ ವೇಳೆ ಇದೀಗ 12ನೇ ತರಗತಿ ಓದುತ್ತಿರುವ ನೊಂದ ಬಾಲಕಿ ತನ್ನ ಮೇಲಾಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದಳು.
ಇದೀಗ ಅಧಿಕಾರಿಯ ಅಮಾನತು ಆದೇಶದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮತ್ತು ಆತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.