ಕಂಡವರ ಮನೆಯ ಸಿಸಿ ಕ್ಯಾಮರದಲ್ಲಿ ಬೆಡ್ ರೂಮ್ ಸೀನ್ ನೋಡಿದ ಟೆಕ್ನಿಷಿಯನ್ ಬಂಧನ
ವಾಷಿಂಗ್ಟನ್: ಮನೆಯ ಭದ್ರತೆಗಾಗಿ ಸಿಸಿ ಕ್ಯಾಮರವನ್ನು ಅಳವಡಿಸಿದ್ದರೆ, ಸಿಸಿಟಿವಿ ಟೆಕ್ನಿಷಿಯನ್ ಮಾಡಿದ ಘನಂದಾರಿ ಕೆಲಸದಿಂದಾಗಿ ಸಿಸಿ ಕ್ಯಾಮರಾವೇ ಒಂದು ಸಮಸ್ಯೆಯಾಗಿ ಪರಿಣಮಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ಖಾಸಗಿ ಕಂಪೆನಿಯ ಟೆಕ್ನಿಷಿಯನ್ ತನ್ನ ಸಂಸ್ಥೆಯ ಕಡೆಯಿಂದ ಮನೆಗಳಿಗೆ ಸಿಸಿ ಕ್ಯಾಮರ ಸೇರಿದಂತೆ ರಕ್ಷಣಾ ತಂತ್ರಜ್ಞಾನಗಳನ್ನು ಅಳವಡಿಸಲು ಹೋಗುತ್ತಿದ್ದ. ಸಿಸಿ ಕ್ಯಾಮರ ಅಳವಡಿಸುವಾಗ ಮನೆ ಮಾಲಕರ ಇ ಮೇಲ್ ಐಡಿ ಪಡೆದು ಸೆಟ್ಟಿಂಗ್ ಮಾಡಿಕೊಳ್ಳುತ್ತಿದ್ದನಲ್ಲದೇ ಆ ಇ ಮೇಲ್ ಐಡಿಯನ್ನು ತನ್ನ ಇ ಮೇಲ್ ಗೆ ಲಿಂಕ್ ಮಾಡಿಕೊಳ್ಳುತ್ತಿದ್ದ. ಬಳಿಕ ಯಾವ ಮನೆಯಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ಆತ ನೋಡುತ್ತಿದ್ದ.
ಯಾವ ಮನೆಯಲ್ಲಿ ಸುಂದರ ಯುವತಿಯರಿದ್ದಾರೆ ಎಂದು ಗಮನಿಸಿದ ಬಳಿಕ ಈತ ಈ ಕೃತ್ಯ ನಡೆಸುತ್ತಿದ್ದ. ಹೀಗಾಗಿ ಸಿಸಿ ಕ್ಯಾಮರ ಹಾಕಿಸಿದವರ ಬೆಡ್ ರೂಮ್ ಸೀನ್ ನಿಂದ ಹಿಡಿದು ಪ್ರತಿಯೊಂದನ್ನೂ ಈತ ನೋಡುತ್ತಿದ್ದ.
ಇತ್ತೀಚೆಗೆ ಈ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ತಕ್ಷಣ ಪೊಲೀಸರು ತೆರಳಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ತಪ್ಪೊಪ್ಪಿಕೊಂಡಿರುವ ಆರೋಪಿ, ಈವರೆಗೆ ತಾನು 200 ಗ್ರಾಹಕರ ಮನೆಯ 9,600 ವಿಡಿಯೋಗಳನ್ನು ನೋಡಿದ್ದ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. ಈ ಪ್ರಕರಣದಲ್ಲಿ ಆರೋಪಿಗೆ 5 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಲಾಗಿದೆ.