ವಿಮಾನ ಅಪಘಾತದಲ್ಲಿ ವ್ಯಾಗ್ನರ್ ಮುಖ್ಯಸ್ಥ ಸಾವು: ಮೌನ ಮುರಿದ ವ್ಲಾದಿಮಿರ್ ಪುಟಿನ್ ರಿಂದ ಸಂತಾಪ

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟ ಯೆವ್ಗೆನಿ ಪ್ರಿಗೋಜಿನ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಸೇನಾ ಮುಖ್ಯಸ್ಥರ ವಿರುದ್ಧ ದಂಗೆ ಎದ್ದ ಎರಡು ತಿಂಗಳ ನಂತರ ಯಾರೂ ಬದುಕುಳಿಯದೆ ವಿಮಾನ ಅಪಘಾತಕ್ಕೀಡಾದ ನಂತರ ಅವರು ಮೌನ ಮುರಿದಿದ್ದಾರೆ.
ಪ್ರಿಗೋಜಿನ್ ಬಗ್ಗೆ ಮೌನ ಮುರಿದ ಪುಟಿನ್, ಪ್ರಿಗೋಜಿನ್ ಅವರನ್ನು 1990 ರ ದಶಕದಿಂದಲೂ ತಿಳಿದಿದೆ. ಆತ ಪ್ರತಿಭಾವಂತ ಉದ್ಯಮಿ ಎಂದು ಬಣ್ಣಿಸಿದರು. ಇನ್ನು ವಿಮಾನ ಅಪಘಾತ ಕುರಿತು ತನಿಖೆ ನಡೆಯುತ್ತದೆ ಎಂದು ಹೇಳಿದರು.
ರಷ್ಯಾದ ರಾಜಧಾನಿ ಮಾಸ್ಕೋದ ಉತ್ತರ ಭಾಗದಲ್ಲಿ ಖಾಸಗಿ ವಿಮಾನವೊಂದು ಪತನಗೊಂಡು ಹತ್ತು ಮಂದಿ ಸಾವನ್ನಪ್ಪಿದ್ದರು. ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಕೂಡ ವಿಮಾನದಲ್ಲಿದ್ದು ಅವರು ಸಾವನ್ನಪ್ಪಿದ್ದಾರೆ.
ರಷ್ಯಾದ ನಟೋರಿಯಸ್ ಖಾಸಗಿ ಮಿಲಿಟರಿ ಸಂಸ್ಥೆ ವ್ಯಾಗ್ನರ್ ಗ್ರೂಪ್‌ನ ಮಾಸ್ಟರ್ ಮೈಂಡ್ ಈ ಯೆವ್ಗೆನಿ ಪ್ರಿಗೊಜಿನ್. ರಷ್ಯಾದ ಸೇನೆ ಜತೆಗೆ ವಿಫಲ ದಂಗೆ ನಡೆಸಿದ ಎರಡು ತಿಂಗಳ ಬಳಿಕ ಈ ಘಟನೆ ನಡೆದಿದೆ. ಹೀಗಾಗಿ, ಇವರ ಸಾವು ಸಾಕಷ್ಟು ಸಂದೇಹಗಳನ್ನು ಹುಟ್ಟು ಹಾಕಿದೆ.
ಯೆವ್ಗೆನಿ ಪ್ರಿಗೊಜಿನ್ ಅವರು 1961 ರಲ್ಲಿ ಲೆನಿನ್ಗ್ರಾಡ್‌ನಲ್ಲಿ ಜನಿಸಿದರು. ಇದು ಸೇಂಟ್ ಪೀಟರ್ಸ್‌ಬರ್ಗ್‌ನ ಒಂದು ಊರು. ತನ್ನ 20ನೇ ವಯಸ್ಸಿನಲ್ಲಿಯೇ ದರೋಡೆ, ವಂಚನೆ, ಆಕ್ರಮಣ, ಹೋರಾಟ ಇತ್ಯಾದಿಗಳಲ್ಲಿ ಭಾಗಿಯಾದ ಕುಖ್ಯಾತಿ ಇವರದ್ದು. ಇಂತಹ ತಪ್ಪುಗಳ ಕಾರಣದಿಂದ 13 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. 9 ವರ್ಷಗಳಲ್ಲಿ ಬಿಡುಗಡೆಯಾದ ಇವರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಿತ್ರರಾಗಿಯೂ ಇದ್ದರು. ಇವರಿಬ್ಬರು ಜನಿಸಿದ ಸ್ಥಳವೂ ಒಂದೇ. ಹೀಗಾಗಿ ಬಹುಕಾಲದ ಮಿತ್ರರಾಗಿದ್ದರು.