WWE ಸ್ಟಾರ್ ಬ್ರೇ ವ್ಯಾಟ್ ಹೃದಯಾಘಾತದಿಂದ ನಿಧನ | 36 ವರ್ಷದಲ್ಲೇ ಸಾವಿಗೀಡಾದ ಕುಸ್ತಿಪಟು

WWE ಸ್ಟಾರ್ ಬ್ರೇ ವ್ಯಾಟ್ (ವಿಂಡ್ ಹ್ಯಾಮ್ ರೊಟುಂಡಾ) ತಮ್ಮ 36ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದು, WWE ಮನೋರಂಜನೆ ಪ್ರಪಂಚಕ್ಕೆ ದೊಡ್ಡ ಆಘಾತವನ್ನು ನೀಡಿದ್ದಾರೆ.
ಬ್ರೇ ವ್ಯಾಟ್ ಅವರ ನಿಧನವನ್ನು WWE ವ್ಯವಸ್ಥಾಪಕರಾದ ತ್ರಿಪಲ್ ಹೆಚ್ ಅವರು ದೃಢಪಡಿಸಿದ್ದಾರೆ. ಬ್ರೇ ವ್ಯಾಟ್ (ಇವರ ನಿಜವಾದ ಹೆಸರು ವಿಂಡ್ ಹ್ಯಾಮ್ ರೊಟುಂಡಾ) ಅವರು 36ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸೃಜನಶೀಲ ಪಾತ್ರದೊಂದಿಗೆ ಅವರು ಕುಸ್ತಿ ಮನೋರಂಜನೆಗೆ ಉತ್ತಮ ಜನಪ್ರಿಯತೆ ತಂದಿದ್ದರು. ಇಂದು ಮುಂಜಾನೆ ಅವರು ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ ಎಂದು ತ್ರಿಪಲ್ ಹೆಚ್ ಟ್ವೀಟ್ ಮಾಡಿದ್ದಾರೆ.
ಇನ್ನೂ WWE ತಾರೆ ದಿ ರಾಕ್ (ಡ್ವೇನ್ ಜಾನ್ಸನ್) ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಬ್ರೇ ವ್ಯಾಟ್ ಅವರ ನಿಧನ ಸುದ್ದಿಯಿಂದ ನಾನು ಎದೆಗುಂದಿದ್ದೇನೆ. ಯಾವಾಗಲೂ ರೊಂಟುಡಾ ಅವರ ಕುಟುಂಬದ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದೆ. WWE ಯುನಿವರ್ಸ್ ನ ವಿಶಿಷ್ಟವಾದ ಪಾತ್ರ ಅವರಾಗಿದ್ದರು. ಇಂದು ಮೇಕೆ(ಬ್ರೇ ವ್ಯಾಟ್ ಮುಖವಾಡ)ಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.