ಬಿಸಿಯೂಟ ಸೇವಿಸಿ 70 ವಿದ್ಯಾರ್ಥಿಗಳು ಅಸ್ವಸ್ಥ: ದೆಹಲಿ ಸರ್ಕಾರಿ ಶಾಲೆ ವಿರುದ್ಧ ಎಫ್ಐಆರ್

ದೆಹಲಿಯ ಸರ್ವೋದಯ ಬಾಲ ವಿದ್ಯಾಲಯ ಶಾಲೆಯಲ್ಲಿ ಮಧ್ಯಾಹ್ನದ ಊಟ ಸೇವಿಸಿದ ನಂತರ ಹೊಟ್ಟೆ ನೋವು ಮತ್ತು ವಾಂತಿ ಮಾಡಿದ ಸುಮಾರು 70 ಮಂದಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಗರಪುರದ ದುರ್ಗಾಪಾರ್ಕ್‌ನಲ್ಲಿರುವ ಸರ್ವೋದಯ ಬಾಲ ವಿದ್ಯಾಲಯ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ 6 ರಿಂದ 8 ನೇ ತರಗತಿಯ ಸುಮಾರು 70 ಮಂದಿ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ ಎಂದು ಸಾಗರ್ಪುರ ಪೊಲೀಸ್ ಠಾಣೆಗೆ ಕರೆ ಬಂದಿದೆ ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ಸಿ ಹೇಳಿದ್ದಾರೆ.
“ಪೊಲೀಸ್ ತಂಡವು ತಕ್ಷಣ ಸ್ಥಳಕ್ಕೆ ಹೋಗಿ ವಿದ್ಯಾರ್ಥಿಗಳನ್ನು ಡಿಡಿಯು ಆಸ್ಪತ್ರೆ ಮತ್ತು ದಾಬ್ರಿಯ ದಾದಾ ದೇವ್ ಆಸ್ಪತ್ರೆಗೆ ದಾಖಲಿಸಿದೆ” ಎಂದು ಡಿಸಿಪಿ ಹೇಳಿದ್ದಾರೆ. ಶಾಲಾ ಅಧಿಕಾರಿಗಳ ಪ್ರಕಾರ, ಮಧ್ಯಾಹ್ನದ ಊಟದ ನಂತರ ವಿದ್ಯಾರ್ಥಿಗಳಿಗೆ ಸೋಯಾ ಜ್ಯೂಸ್ ನೀಡಲಾಯಿತು. ಇದು ಹೊಟ್ಟೆ ನೋವು ಮತ್ತು ವಾಂತಿಗೆ ಕಾರಣವಾಯಿತು.
“ಅಪರಾಧ ತಂಡವನ್ನು ಸ್ಥಳಕ್ಕೆ ಕರೆಸಲಾಯಿತು. ಆಹಾರ ಮತ್ತು ರಸದ ಅವಶೇಷಗಳನ್ನು ಸಾಕ್ಷ್ಯವಾಗಿ ಸಂಗ್ರಹಿಸಲಾಯಿತು. ಮಧ್ಯಾಹ್ನದ ಊಟದಲ್ಲಿ ಪುರಿ ಸಬ್ಜಿ ಬಡಿಸಿದ ನಂತರ, 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸೋಯಾ ರಸವನ್ನು ವಿತರಿಸಲಾಯಿತು. ದೂರುಗಳನ್ನು ಸ್ವೀಕರಿಸಿದ ನಂತರ ಆಹಾರ ಮತ್ತು ಜ್ಯೂಸ್ ವಿತರಣೆಯನ್ನು ನಿಲ್ಲಿಸಲಾಯಿತು” ಎಂದು ಡಿಸಿಪಿ ಹೇಳಿದ್ದಾರೆ.
ಈಗ ಎಲ್ಲಾ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ವಿವಿಧ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸುವ ಮೂಲಕ ತನಿಖೆ ನಡೆಸಲಾಗುವುದು ಎಂದು ಡಿಸಿಪಿ ಹೇಳಿದ್ದಾರೆ.