ಎಸ್ ಟಿ ಯುವಕನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ಯುವತಿಯ ಬರ್ಬರ ಹತ್ಯೆ: ತಂದೆ ಮತ್ತು ಆತನ ಇಬ್ಬರು ಸಹೋದರರ ಬಂಧನ
ಕೋಲಾರ: ಪರಿಶಿಷ್ಟ ಪಂಗಡದ ಯುವಕನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ಸಮುದಾಯದ ವ್ಯಕ್ತಿಯೋರ್ವ ತನ್ನ ಪುತ್ರಿಯನ್ನು ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆ ನಡೆಸಿದ ಅಮಾನವೀಯ ಘಟನೆ ನಡೆದಿದೆ.
ರಮ್ಯಾ(19) ತಂದೆಯಿಂದಲೇ ಹತ್ಯೆಗೀಡಾದ ಯುವತಿಯಾಗಿದ್ದಾಳೆ. ತಂದೆಯೇ ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆ ಅಂತ ಕಥೆ ಕಟ್ಟಿ ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ, ಇದು ಕೊಲೆ ಎನ್ನುವುದು ಊರಲ್ಲಿ ಬಾಯಿಯಿಂದ ಬಾಯಿಗೆ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಪಾಪಿ ತಂದೆಯನ್ನು ಕರೆಸಿ ವಿಚಾರಣೆ ನಡೆಸಿದಾಗ, ಇದೊಂದು ಮರ್ಯಾದೆಗೇಡು ಹತ್ಯೆ ಅನ್ನೋದು ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ನತದೃಷ್ಟ ಯುವತಿ ರಮ್ಯಾಳ ತಂದೆ, ಪ್ರಮುಖ ಆರೋಪಿ ವೆಂಕಟೇಶಗೌಡ ಮತ್ತು ಆತನ ಸಹೋದರರಾದ ಮೋಹನ್ ಹಾಗೂ ಚೌಡೇಗೌಡ ಎಂಬವರನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಕ್ಕಲಿಗ ಸಮುದಾಯದ ಯುವತಿ ರಮ್ಯಾ, ಪರಿಶಿಷ್ಟ ಜಾತಿಯ ಯುವಕನನ್ನು ಬಹಳ ಇಷ್ಟಪಟ್ಟು ಪ್ರೀತಿಸುತ್ತಿದ್ದಳು. ಮನೆಯವರು ಆತನ ಜಾತಿ ಬೇರೆ ಎಂಬ ಕಾರಣಕ್ಕೆ ಸಾಕಷ್ಟು ಬಾರಿ ಆತನಿಂದ ದೂರವಿರುವಂತೆ ಬೆದರಿಕೆ ಹಾಕಿದ್ದರೂ, ಯುವತಿ ಕೇಳಿರಲಿಲ್ಲ ಎನ್ನಲಾಗಿದೆ. ಮನೆಯವರಿಗೆ ಅವರ ಜಾತಿಯ ಮರ್ಯಾದೆ ಮುಖ್ಯ, ಹೊಸ ಪೀಳಿಗೆಯ ಯುವತಿ ಜಾತಿ ಬೇಧಗಳನ್ನು ಮರೆತು ಯುವಕನನ್ನು ಪ್ರೀತಿಸುತ್ತಿದ್ದಳು. ಆದ್ರೆ ಜಾತಿವಾದಿಗಳಿಗೆ ಇದು ಸಹಿಸಲಿಲ್ಲ, ಜಾತಿ ವಾದದ ಕೊನೆಯ ಅಸ್ತ್ರ ಹಿಂಸೆ, ಹತ್ಯೆಯಲ್ಲೇ ಅಮಾಯಕ ಯುವತಿಯೋರ್ವಳ ಜೀವನ ಅನ್ಯಾಯವಾಗಿ ಮುಗಿದು ಹೋಗಿದೆ.