ಬಿಜೆಪಿಯಲ್ಲಿ ಬುಗಿಲೆದ್ದ ಭಿನ್ನಮತ: ಯಡಿಯೂರಪ್ಪರನ್ನು ಹೊರಗಿಟ್ಟು ಲೋಕಸಭಾ ಪೂರ್ವ ಸಿದ್ಧತಾ ಸಭೆ!
ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪನವರನ್ನು ಸಿಎಂ ಕುರ್ಚಿಯಿಂದ ಇಳಿಸಿದ ನಂತರ ರಾಜ್ಯ ಬಿಜೆಪಿ ಒಂದಲ್ಲ ಒಂದು ಸಂಕಷ್ಟವನ್ನು ಎದುರಿಸುತ್ತಿದೆ. ಇದೀಗ ಲೋಕಸಭಾ ಪೂರ್ವ ಸಿದ್ಧತಾ ಸಭೆಯ ಸಂದರ್ಭದಲ್ಲಿ ಯಡಿಯೂರಪ್ಪನವರನ್ನು ಹೊರಗಿಟ್ಟು ಸಭೆ ನಡೆಸಿರುವುದು ಮತ್ತೊಮ್ಮೆ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ ಬಿಜೆಪಿ, ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲವಾಗಿಲ್ಲ, ಒಂದೆಡೆಯಲ್ಲಿ ಪಕ್ಷ ಬಿಟ್ಟವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಕರೆ ನೀಡಿದರೆ, ಮತ್ತೊಂದೆಡೆಯಲ್ಲಿ ಪಕ್ಷದ ಹಿರಿಯನ್ನ ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಯಡಿಯೂರಪ್ಪನವರನ್ನು ಹೊರಗಿಟ್ಟು ಸಭೆ ನಡೆಸಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎಂ.ಪಿ.ರೇಣುಕಾಚಾರ್ಯ, ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಯಡಿಯೂರಪ್ಪ ಶಾಪ ಕಾರಣ. ನಿನ್ನೆ ಸಭೆ ಮಾಡಿದವರು ಬಿಜೆಪಿ ಕಟ್ಟಿ ಬೆಳೆಸಿದವರಲ್ಲ. ಅವರು 2006-07 ರಲ್ಲಿ ಸಂಘ ಪರಿವಾರದಿಂದ ಬಂದವರು. ಅವರಿಗೆ ತಾನು ಮುಖ್ಯಮಂತ್ರಿ ಆಗಬೇಕು ಅಂತಾ ಇದೆ. ಅವರು ಇಡೀ ಪಕ್ಷವನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಅವರ ಪರವಾಗಿ ಒಂದು ಗ್ಯಾಂಗ್ ಇದೆ. ಅವರು ಯಾರೂ ಜನರಿಂದ ಆಯ್ಕೆಯಾದವರಲ್ಲ, ಪಕ್ಷ ಕಟ್ಟಿದವರಲ್ಲ ಎಂದು ಕಿಡಿಕಾರಿದ್ದಾರೆ.
ಇಡೀ ಪಕ್ಷ ಅವರ ಶಿಷ್ಯರ ಕೈಯಲ್ಲಿ ಇರಬೇಕು ಅಂತಾ ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡಿದರು. ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರನ್ನೆಲ್ಲಾ ಮುಗಿಸಿದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಲಕ್ಷ್ಮಣ ಸವದಿಗೆ ಟಿಕೆಟ್ ಕೊಡದೇ ಕಡೆಗಣಿಸಿದರು. ಏಳೆಂಟು ಜನರ ಗುಂಪು ಕಟ್ಟಿಕೊಂಡಿದ್ದಾರೆ. ಜೀ ಅಂದರೆ ಮಾತ್ರ ಅಲ್ಲಿ ಬೆಲೆ. ಸಂಘಟನೆ ನಿಮ್ಮಿಂದ ಹಾಳಾಗಿದೆ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮನೆಯ ಪ್ರತಿ ಗೋಡೆಗೂ ಒಂದೊಂದು ಬಾಗಿಲು ಎಂಬಂತಾಗಿದೆ. ವಿರೋಧ ಪಕ್ಷದ ನಾಯಕನಿಲ್ಲದೇ, ಬ್ರೇಕ್ ಇಲ್ಲದ ವಾಹನದಂತೆ ಸಾಗುತ್ತಿರುವ ರಾಜ್ಯ ಬಿಜೆಪಿ ಸರಿಯಾದ ಸಾರಥಿ ಇಲ್ಲದೇ ಮಂಕಾಗಿದೆ. ಇನ್ನೊಂದೆಡೆ ಹಿಂದೂ ಪರ ಸಂಘಟನೆಗಳಲ್ಲಿಯೂ ಬಿಜೆಪಿ ಬಗ್ಗೆ ಜಾಗೃತಿ ಮೂಡಿದ್ದು, ಬಿಜೆಪಿಯಿಂದ ಪ್ರತ್ಯೇಕವಾಗಿ ನಿಂತು ಯೋಚಿಸುವ ಹಿಂದೂ ಪರ ಸಂಘಟನೆಗಳನ್ನು ಮನವೊಲಿಸುವುದು ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಸವಾಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.