ನನ್ನ ಮನೆಯಲ್ಲೊಬ್ಬ VIP
- ಶ್ರೀಕಾಂತ ಪತ್ರೆಮರ
ನನ್ನ ಮನೆಯಲ್ಲೊಬ್ಬ VIP ಎಂದರೆ ಅದುವೇ ನನ್ನ ಅಪ್ಪ ದಿವಂಗತ ಶ್ರೀ ಪಿ. ಸಿದ್ದರಾಮಪ್ಪ, ನಿವೃತ್ತ ಶಾಲಾ ಶಿಕ್ಷಕರು, ಹಿರೇಉಡ ಗ್ರಾಮ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ.
ನಾನು ಹುಟ್ಟುವ ಮೊದಲೇ ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ನನ್ನ ತಂದೆ ಹಲವಾರು ಕವನಗಳನ್ನು ಬರೆದಿದ್ದರು. ಅವು ಈಗಲೂ ನನ್ನ ಬಳಿ ಇವೆ. ಸಂಸಾರ ಸಾಗರದಲ್ಲಿ ಮುಳುಗುತ್ತ, ತೇಲುತ್ತ ಹೆಂಡತಿ ಮಕ್ಕಳ ಪೋಷಣೆಗೆ, ಶಿಕ್ಷಕ ವೃತ್ತಿ, ಕೃಷಿ, ಪಶು ಸಂಗೋಪನೆ, ಹೊಲಿಗೆ, ಅಂಗಡಿ ಮುಂತಾದ ಹಲವು ಬಗೆಯ ಕಸುಬುಗಳನ್ನು ಮಾಡುತ್ತ ಜೀವನದುದ್ದಕ್ಕೂ ಸಂಪಾದನೆಗೆ ಗಮನ ಹರಿಸಿ, ಅವರ ಸಾಹಿತ್ಯದ ಆಸಕ್ತಿಯನ್ನು ನೇಪಥ್ಯಕ್ಕೆ ಸರಿಸಿದ್ದು ನನಗೆ ಈಗಲೂ ಬೇಸರವಿದೆ. ಆದರೆ ಅದು ಅವರಿಗೆ ಅನಿವಾರ್ಯವಾಗಿತ್ತೇನೋ ಎಂದು ಈಗಿನ ಅರಿವು ಎಚ್ಚರಿಸುತ್ತಿದೆ.
ಅವರ ಕಾಯಕವೇ ಕೈಲಾಸ ಎಂಬುವ ಜೀವನದ ಧರ್ಮವು ನಾನು ಬೆಳೆದು ಸ್ವತಂತ್ರವಾಗಿ ಯೋಚಿಸುವ ನಲವತ್ತರಾಚೆಗಿನ ವಯಸ್ಸಿಗೆ ಅರಿವಿಗೆ ಬಂದಿತು. ಅಪ್ಪ ಇಹಲೋಕ ತ್ಯಜಿಸಿ ಈಗ್ಗೆ ಹನ್ನೊಂದು ವರ್ಷಗಳಾಯಿತು. ಈಗಲೂ ಅವರು ಬದುಕಿದ ರೀತಿ, ಅವರ ಜೀವನದ ಧ್ಯೇಯಗಳು ನನಗೆ ಮಾರ್ಗದರ್ಶಿ.
ಬಡತನದಲ್ಲೇ ಬೆಳೆದ ಅಪ್ಪನಿಗೆ, ಸ್ವಾವಲಂಬನೆ ಬದುಕಿನ ಮೂಲ ಮಂತ್ರವಾಗಿತ್ತು. ಸ್ವಂತ ಪರಿಶ್ರಮದಿಂದ ಬದುಕನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಅವರಿಗೆ ಒದಗಿತ್ತು. ಹಾಗಾಗಿ ಹಣ, ಸಂಪಾದನೆಯನ್ನು ತಂದು ಕೊಡದ ಈ ಸಾಹಿತ್ಯದ ಓದು, ಬರಹವನ್ನು ಹವ್ಯಾಸವಾಗಿಯೂ ಇಟ್ಟುಕೊಳ್ಳಲಾಗದ ಅಸಹಾಯಕತೆಯು ಅವರನ್ನು ಆವರಿಸಿತ್ತು, ಕಾಡುತ್ತಲಿತ್ತು ಎಂದು ಅರ್ಥೈಸಬಹುದು.
ಕೆಳ ಮದ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಐದು ಜನ ಮಕ್ಕಳ ಬದುಕಿಗೆ ಬೇಕಾದ ಕನಿಷ್ಟ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಲೇ ಹಣ್ಣಾದ ಅಪ್ಪ ಕಡೆಗೂ ಸಾಹಿತ್ಯದತ್ತ ಹೊರಳಿಕೊಳ್ಳಲೇ ಇಲ್ಲ. ಇದು ಬಹಳ ನೋವಿನ ಸಂಗತಿ ನನಗೆ.
ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಉಪಾಧ್ಯಾಯ ವೃತ್ತಿ ಮಾಡುವಾಗ ಸುಮತೀಂದ್ರ ನಾಡಿಗರ, ಮತ್ತಿತರ ಸಮಕಾಲೀನ ಸಾಹಿತಿಗಳ ಒಡನಾಟವಿತ್ತೆಂದು ಹೇಳಿದ್ದು ನನಗೆ ನೆನಪಿದೆ. ಕಸ್ತೂರಿ ಮಾಸ ಪತ್ರಿಕೆ, ಇನ್ನಿತರ ನಿಯತಕಾಲಿಕೆಗಳನ್ನು 1965-70 ರ ಸಮಯದಲ್ಲಿ ತಾವಿರುವ ಚಿಕ್ಕ ಗ್ರಾಮಕ್ಕೆ ತರಿಸಿಕೊಂಡು ಓದು, ಬರಹದಲ್ಲಿದ್ದಂತಹವರು. ಕಾದಂಬರಿಯನ್ನೂ ಬರೆದಿದ್ದರು, ಕಾಲಗರ್ಭದಲ್ಲಿ ಅದು ಕಾಣೆಯಾಗಿ ಹೋಯಿತು.
ಅಪ್ಪ ಮಾತನಾಡುವಾಗ, ಸಿಟ್ಟಾಗಿ ಬೈಯ್ಯುವಾಗಲೂ ಶುದ್ಧ ಕನ್ನಡ ಭಾಷೆಯನ್ನು ಬಳಸುತ್ತಿದ್ದರು. ನಾ ಬೆಳೆದ ಹಳ್ಳಿಯಲ್ಲಿ ಇತರರು ಯಾರೂ ಹಾಗೆ ಮಾತನಾಡುವುದನ್ನು ನಾನು ನನ್ನ ಬಾಲ್ಯದಲ್ಲಿ ಕಂಡಿರದಿದ್ದುದು ಈಗಲೂ ನೆನಪಾಗುತ್ತಿದೆ. ಅಂದರೆ ಅಂತಹ ಭಾಷಾ ಜ್ಞಾನ, ಪದಸಂಪತ್ತು ಅವರಿಗಿತ್ತು.
ನನಗೆ ನಿಜವಾಗಿಯೂ ಒಂದು ಸಂಸ್ಕಾರವೇನಾದರೂ ಇದ್ದರೆ ಅದು ಅವರ ಕೊಡುಗೆ. ನನ್ನ ವ್ಯಕ್ತಿತ್ವದ ಮೇಲೆ ಅವರ ಪ್ರಭಾವ ಬಹಳವಿದೆ. He is an unsung HERO. He is my VIP.
ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿ ಬೆಳೆದ ತಲೆಮಾರಿನವರಾಗಿದ್ದ ಅಪ್ಪನ ಬದುಕಿನ ಬವಣೆಗಳು ಹಲವಾರಿದ್ದವು. ಸ್ವಂತ ಸುಖವನ್ನು ಕಡೆಗಣಿಸಿ ಮಕ್ಕಳಿಗಾಗಿ ಶ್ರಮಿಸಿದ್ದೇ ಹೆಚ್ಚು. ಕಡೆಗಾಲದಲ್ಲಿ ಅನಾರೋಗ್ಯಕ್ಕೆ ತುತ್ತಾದಾಗಲೂ ಯಾವ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲ, ಮಕ್ಕಳಿಗೆ ಹಣಕಾಸಿನ ಹೊರೆಯಾಗಬಾರದು, ವ್ಯರ್ಥ ಹಣ ವ್ಯಯವಷ್ಟೇ ಎಂದು ತಾವೇ ನಿರ್ಧರಿಸಿ ಕೊನೆಯಾದ ಇವರು ನನಗೆ ಸದಾ ಪ್ರಾಥಃಸ್ಮರಣೀಯರು.
ಈ ತರಹದ ಪೋಷಕರನ್ನು ಪಡೆದ ನಾನು ಧನ್ಯ. ತನಗಾಗಿ ಬದುಕದೇ ತನ್ನ ಕುಡಿಗಳಿಗಾಗಿ ಅವರು ಬದುಕಿದ್ದೇ ಹೆಚ್ಚು. ಈ ತ್ಯಾಗ ಮನೋಭಾವ ಈ ಮಣ್ಣಿನ ಗುಣವೇ ಇರಬೇಕು. ಏಕೆಂದರೆ ಇತರರ ಬದುಕಿನ ಇದೇ ತರಹದ ಸಾರ್ಥಕ ಬದುಕಿನ, ತ್ಯಾಗ ಮನೋಧರ್ಮದ ಕಥಾನಕಗಳನ್ನು ಓದುತ್ತಲೇ ಇರುತ್ತೇನೆ. ಸಮಾಜಕ್ಕೆ ನನ್ನ ಅಪ್ಪ VIP ಯಾಗಿರಲಿಲ್ಲ. ನನಗೆ ಮಾತ್ರ ಅಂದೂ ಇಂದೂ, ಮುಂದೂ ನನಗೆ VIP ಯೇ ಹೌದು.