ಪ್ರೀತಿಸಿ ಮದುವೆಯಾದವರ ಬೆನ್ನಟ್ಟಿದ ಜಾತಿ ಭೂತ | ರಕ್ಷಣೆ ನೀಡಬೇಕಿದ್ದ ಪೊಲೀಸರಿಂದಲೇ ಜೋಡಿಗೆ ಕಿರುಕುಳ? - Mahanayaka
6:41 AM Friday 20 - September 2024

ಪ್ರೀತಿಸಿ ಮದುವೆಯಾದವರ ಬೆನ್ನಟ್ಟಿದ ಜಾತಿ ಭೂತ | ರಕ್ಷಣೆ ನೀಡಬೇಕಿದ್ದ ಪೊಲೀಸರಿಂದಲೇ ಜೋಡಿಗೆ ಕಿರುಕುಳ?

04/02/2021

ಕಲಬರ್ಗಿ: ಅಂತರ್ಜಾತಿಯ ವಿವಾಹವಾದ ಜೋಡಿಗೆ ಪೋಷಕರು ಮೇಲಿಂದ ಮೇಲೆ ಧಮ್ಕಿ ಹಾಕಿ ಬೆದರಿಸಿದ್ದರೆ, ಇತ್ತ ರಕ್ಷಣೆ ನೀಡಬೇಕಾದ ಪೊಲೀಸರು ಕೂಡ ಜಾತಿ ಪೀಡೆಗಳಂತೆ ಜೋಡಿಗೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ವಿಜಯಪುರ ಜಿಲ್ಲೆಯ ಇಂಡಿ ನಿವಾಸಿ ಅಯ್ಯಪ್ಪ ಸ್ವಾಮಿ ಹಾಗೂ ಕಲಬುರ್ಗಿ ದೇವಿನಗರದ ಕಸ್ತೂರಿ ಎಂಬ ಯುವತಿಗೆ ಬೆಳಗಾವಿಯ ಖಾಸಗಿ ಕಾಲೇಜಿನಲ್ಲಿ ಬಿಎಂಎಸ್ ದ್ವಿತೀಯ ವರ್ಷದಲ್ಲಿ ಓದುತ್ತಿರುವಾಗಿ ಪ್ರೀತಿ ಹುಟ್ಟಿದೆ. ಪರಸ್ಪರ ಒಪ್ಪಿ ಅವರು  ಓಡಿ ಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು.

ಈ ಸುದ್ದಿ ತಿಳಿದ ಕಸ್ತೂರಿಯ ಪೋಷಕರು ನವೆಂಬರ್ 18ರಂದು ಕಲಬುರ್ಗಿ ಮಹಿಳಾ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಯುವಕ ಪತ್ತೆಯಾಗಲಿಲ್ಲ ಎಂದು ಯುವಕನ ತಂದೆಯನ್ನು ಲಾಕಪ್ ನಲ್ಲಿ ಹಾಕಿ ಅಮಾನವೀಯವಾಗಿ ಥಳಿಸಲಾಗಿದೆ. ರಾತ್ರಿಯಿಡೀ ಲಾಕಪ್ ನಲ್ಲಿ ಯುವಕನ ತಂದೆಗೆ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಲಾಗಿದ್ದು, ಹಲ್ಲೆಯ ಪರಿಣಾಮ ಅವರು ಕಲಬುರ್ಗಿಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ ಪೆಕ್ಟರ್ ಸಂಗಮೇಶ ಪಾಟೀಲ್, ಪಿಸಿ ನೆಹರು ಸಿಂಗ್ ಇಬ್ಬರನ್ನೂ ಕರ್ತವ್ಯ ಲೋಪದ ಆರೋಪದ ಅಡಿ ಅಮಾನತುಗೊಳಿಸಲಾಗಿತ್ತು.


Provided by

ಈ ನಡುವೆ ಯುವತಿಯ ಮನೆಯವರು ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದಾರೆ.  ಹೀಗಾಗಿ ನವ ವಿವಾಹಿತರು ಕಲಬುರ್ಗಿ ಹೈಕೋರ್ಟ್ ಪೀಠದ ಎದುರು ಹಾಜರಾಗಿ, ನಾವು ಮೇಜರ್ ಆಗಿದ್ದು, ಪರಸ್ಪರ ಪ್ರೀತಿಸಿ ಸ್ವ ಇಚ್ಛೆಯಿಂದ ಮದುವೆಯಾಗಿರೋದಾಗಿ ಯುವತಿ ಹೇಳಿಕೆ ದಾಖಲಿಸಿದ್ದಾಳೆ. ತಾನು ಅಯ್ಯಪ್ಪ ಸ್ವಾಮಿಯ ಜೊತೆಗೆ ಬದುಕುವುದಾಗಿಯೂ ತಿಳಿಸಿದ್ದಾಳೆ.

ಇಷ್ಟೆಲ್ಲ ನಡೆದರೂ ಯುವಕ ಹಾಗೂ ಯುವತಿಯನ್ನು ಅನಿಷ್ಠ ಜಾತಿ ಪೀಡೆ ಬೆನ್ನಟ್ಟುತ್ತಲೇ ಇದೆ. ಪ್ರತಿ ದಿನ ಇವರು ಕಿರುಕುಳ ಅನುಭವಿಸುತ್ತಲೇ ಇದ್ದಾರೆ ಎಂದು ಜೋಡಿ ಆರೋಪಿಸಿದೆ. ಪೊಲೀಸರು ಹಾಗೂ ಯುವತಿಯ ಪೋಷಕರು ಪದೇ ಪದೇ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ನೀಡಿರುವ ದೂರನ್ನು ವಾಪಸ್ ಪಡೆಯುವಂತೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಒಂದೆಡೆಯಲ್ಲಿ ಯುವತಿಯ ಮನೆಯವರ ಕಿರುಕುಳವಾದರೆ, ಇನ್ನೊಂದೆಡೆಯಲ್ಲಿ ರಕ್ಷಣೆ ನೀಡಬೇಕಾದ ಪೊಲೀಸರೇ ಯುವ ಜೋಡಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದಾಗಿ ನಮ್ಮ ಬದುಕು ನರಕವಾಗಿದೆ ಎಂದು ಜೋಡಿ ತಿಳಿಸಿದ್ದು, ನಮಗೆ ಸೂಕ್ತ ರಕ್ಷಣೆ ನೀಡಿ ಎಂದು ಕಲಬುರ್ಗಿ ಕಮಿಷನರ್ ಗೆ ಭದ್ರತೆ ಕೋರಿ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ