ಕಲಬುರಗಿಯಲ್ಲಿ ಭರ್ಜರಿ ಮಳೆ: ಪೊಲೀಸ್ ಠಾಣೆ, ಶಾಲೆಗೆ ನುಗ್ಗಿದ ನೀರು!
04/09/2023
ಕಲಬುರಗಿ: ಜಿಲ್ಲೆಯಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು, ಮತ್ತೊಂದೆಡೆ ವಾಹನ ಸವಾರರು ಪರದಾಡುವಂತಾಗಿದೆ. ಕಳೆದೆರಡು ದಿನಗಳಿಂದ ಯೆಲ್ಲೋ ಅಲಾರ್ಟ್ ಘೋಷಣೆ ಮಾಡಲಾಗಿತ್ತು. ಇಂದು ಕೂಡ ಮಳೆಯಬ್ಬರ ಮುಂದುವರಿದಿದೆ.
ಸೇಡಂಪಟ್ಟಣದ ಎಸಿ ಕಚೇರಿ ಬಳಿ ಇರುವ ಪೊಲೀಸ್ ಠಾಣೆಗೆ ಮಳೆ ನೀರು ನುಗ್ಗಿದ್ದು, ದಾಖಲಾತಿಗಳನ್ನು ಟೇಬಲ್ ಮೇಲಿಟ್ಟು ಹಾಳಾಗದಂತೆ ನೋಡಿಕೊಳ್ಳುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಗಳಿಲ್ಲದ ಕಾರಣ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ.
ಪೊಲೀಸ್ ಠಾಣೆ ಮಾತ್ರವಲ್ಲದೇ ಸೇಡಂ ತಾಲೂಕಿನ ತೋಟನಳ್ಳಿ ಪ್ರಾಥಮಿಕ ಶಾಲೆಗೆ ಕೂಡ ಮಳೆ ನೀರು ನುಗ್ಗಿದ್ದು, ಶಾಲೆಯ ಮೈದಾನ ಜಲಾವೃತಗೊಂಡಿದೆ.
ಚಿಂಚೋಳಿ ತಾಲೂಕಿನ ಕನಕಾಪುರ ತಾಜಲಾಪುರ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ತಾಲೂಕಿನ ದೋಟಿಕೊಳ ಗ್ರಾಮದಲ್ಲಿ ಯುವಕನೋರ್ವ ಹಳ್ಳದಲ್ಲಿ ಕೊಚ್ಚಿಹೋಗಿದ್ದು, ಸ್ಥಳೀಯರು ಈತನನ್ನು ರಕ್ಷಿಸಿದ್ದಾರೆ. ಒಟ್ಟಿನಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.