ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ INDIA ಹಿಡನ್ ಅಜೆಂಡ ಅನಾವರಣ: ಆರ್.ಅಶೋಕ್
ಬೆಂಗಳೂರು: ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ರವರು ತಮ್ಮ ಹೇಳಿಕೆ ಮೂಲಕ ಐಎನ್‍ಡಿಐಎ ಹಿಡನ್ ಅಜೆಂಡವನ್ನು ಅನಾವರಣಗೊಳಿಸಿದ್ದಾರೆ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಿಂದೂಗಳನ್ನು ಅವಹೇಳನ ಮಾಡುವುದು ಮತ್ತು ಖಂಡಿಸುವುದೇ ಕಾಂಗ್ರೆಸ್ಸಿನ ಮತ್ತು ‘ಇಂಡಿಯ’ ಕೂಟದ ಗುಪ್ತ ಕಾರ್ಯಸೂಚಿ ಎಂದು ಟೀಕಿಸಿದರು.
ವಿಪಕ್ಷಗಳ ಅಜೆಂಡ ಇಂದು ದೇಶದ ಜನರ ಮುಂದೆ ವ್ಯಕ್ತವಾಗಿದೆ. ದೇವಸ್ಥಾನಗಳಿಗೆ ಹೋಗಿ ನಾಮ ಹಾಕಿಕೊಂಡು ಬರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‍ರವರು ಈ ಚಾಳಿಯನ್ನು ಮುಂದುವರೆಸಿದ್ದಾರೆ. ಚುನಾವಣೆ ಬಂದಾಗ ಯಾರು ಕೇಳದಿದ್ದರೂ ನಾನು ಹಿಂದೂ ಎನ್ನುವ ನಾಟಕ ಮಾಡುವುದು ಮತ್ತು ಚುನಾವಣೆ ನಂತರ ಹಿಂದೂಗಳನ್ನು ಬೈಯುವ ಪ್ರವೃತ್ತಿ ಸಿದ್ದರಾಮಯ್ಯರದು ಎಂದು ಆಕ್ಷೇಪಿಸಿದರು.
ಈ ಹೇಳಿಕೆ ಗಮನಿಸಿದ ಜನತೆ ಮುಂದಿನ ಚುನಾವಣೆಗಳಲ್ಲಿ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವ್ಯಕ್ತಿಯೂ ಹುಚ್ಚನ ರೀತಿ ಮಾತನಾಡುತ್ತಾರೆ. ಹಿಂದೂಗಳ ಬಗ್ಗೆ ಮಾತನಾಡುವ ನೈತಿಕ ಅಧಿಕಾರವನ್ನು ಇವರಿಗೆ ಯಾರು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
‘ಇವನು ಹಿಂದೂ ಹೌದೇ ಅಲ್ಲವೇ ಎಂದು ಮೊದಲು ಹೇಳಲಿ. ಆಮೇಲೆ ಮಾತನಾಡಲಿ’ ಎಂದು ಸವಾಲೆಸೆದರು. ‘ಹಿಂದೂಗಳ ಅವಹೇಳನ, ಬೇರೆಯವರ ಓಲೈಕೆ ಮಾಡುವುದು; ಏನು ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರಾ ಇವರು’ ಎಂದು ಕೇಳಿದರು.
ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರವನ್ನು ನಮ್ಮ ದೇಶದೊಳಗೆ ತಂದಿದ್ದಾರೆ. ನಮ್ಮ ಪ್ರಧಾನಿ, ಸೈನಿಕರು ಪಾಕಿಸ್ತಾನ, ಚೀನಾದ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಅಂಥ ಸಂದರ್ಭದಲ್ಲಿ ಇವರು ಹಿಂದೂಗಳ ಭಾವನೆಗೆ ಕೊಡಲಿ ಪೆಟ್ಟು ಹೊಡೆಯುತ್ತಿದ್ದು, ದೇಶದ ಜನತೆ ಇವರನ್ನು ಕ್ಷಮಿಸುವುದಿಲ್ಲ ಎಂದು ನುಡಿದರು.
ಕಾವೇರಿ ನೀರನ್ನು ಮರುಮಾತಿಲ್ಲದೆ ಬಿಟ್ಟ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‍ರವರು ಇದರ ಕುರಿತು ತಮ್ಮ ಅಭಿಪ್ರಾಯ ಹೇಳಬೇಕು. ಧರ್ಮದ ಕುರಿತು ಅವರ ಮಾತನ್ನು ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನ ಸ್ಥಿತಿ ಏನಾಗಲಿದೆ ಎಂದು ಊಹಿಸಿಕೊಳ್ಳಿ ಎಂದು ತಿಳಿಸಿದರು.
ಹಿಂದೂ ಧರ್ಮದ ಕುರಿತು, ಸನಾತನ ಧರ್ಮದ ವಿಚಾರದಲ್ಲಿ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವಹೇಳನಕಾರಿ ಮಾತನ್ನಾಡಿದ್ದು ಅದನ್ನು ಖಂಡಿಸುವುದಾಗಿ ತಿಳಿಸಿದರು. ದೇಶದ ಬೆಳವಣಿಗೆಗೆ ಅನನ್ಯ ಕೊಡುಗೆಯನ್ನು ಸನಾತನ ಹಿಂದೂ ಧರ್ಮ ನೀಡಿದೆ. ಭಾರತ ಎಂದರೆ ಹಿಂದೂಗಳ ಭೂಮಿ. ಹಿಂದೂಗಳಿಗೆ ಇರುವ ದೇಶ ಇದೊಂದೇ ಎಂದು ಪ್ರತಿಪಾದಿಸಿದರು. ಹಿಂದೂ ಎಂಬುದು ಒಂದು ಪರಂಪರೆ. ಸನಾತನ ಎಂಬುದು ನಮ್ಮ ರಕ್ತದ ಕಣಕಣದಲ್ಲೂ ಬಂದಿದೆ ಎಂದರು.