ವಿಮಾನದ ಶೌಚಾಲಯದಲ್ಲಿ ಬೀಡಿ ಸೇದಿದ ವ್ಯಕ್ತಿ ಅರೆಸ್ಟ್!
ಬೆಂಗಳೂರು: ವಿಮಾನದ ಶೌಚಾಲಯದಲ್ಲಿ ಬೀಡಿ ಸೇದಿದ ವ್ಯಕ್ತಿಯೋರ್ವನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದ್ದು, ಆರೋಪಿಯ ವಿರುದ್ಧ ಸಾರ್ವಜನಿಕರ ಸುರಕ್ಷತೆಗೆ ದಕ್ಕೆ(ಸೆ.336) ಮತ್ತು ವಿಮಾನ ನಿಯಮಗಳ ಉಲ್ಲಂಘನೆಯಡಿ ದೂರು ದಾಖಲಿಸಲಾಗಿದೆ.
ಭಾನುವಾರ ರಾತ್ರಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗಿ ಕೆಲ ಹೊತ್ತಿನ ಬಳಿಕ ವಿಮಾನದ ಹಿಂದಿನ ಭಾಗದಲ್ಲಿ ಸುಟ್ಟ ವಾಸನೆ ಇತರ ಪ್ರಯಾಣಿಕರಿಗೆ ಬಂದಿದೆ.
ತಕ್ಷಣವೇ ಅವರು ವಿಮಾನ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ. ವಿಮಾನ ಸಿಬ್ಬಂದಿ ಶೌಚಾಲಯದ ಬಾಗಿಲು ತೆರೆದಿದ್ದಾರೆ. ಈ ವೇಳೆ ಬಾಗಿಲು ತೆರೆದ ಪ್ರಯಾಣಿಕ ಕರುಣಾಕರನ್ ನ ಕೈಯಲ್ಲಿ ಬೀಡಿ ಇರುವುದು ಪತ್ತೆಯಾಗಿದೆ. ಸಿಬ್ಬಂದಿಯನ್ನು ಗಮನಿಸಿದ ವ್ಯಕ್ತಿ ತಕ್ಷಣವೇ ಅರ್ಧ ಸೇದಿದ ಬೀಡಿಯನ್ನು ಶೌಚಾಲಯದೊಳಗೆ ಹಾಕಿ ಫ್ಲಶ್ ಮಾಡಲು ಯತ್ನಿಸಿದ್ದಾನೆ ಎಂದು ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ. ವಿಮಾನ ಲ್ಯಾಂಡ್ ಆದ ತಕ್ಷಣ ಕರುಣಾಕರನ್ ನನ್ನು ಬಂಧಿಸಲಾಗಿದೆ.