ಡೋಲಿಯಲ್ಲಿ ಮಲಗಿಸಿ 20 ಕಿ.ಮೀ. ಹೆಗಲ ಮೇಲೆ ಹೊತ್ತೊಯ್ದು ಗರ್ಭೀಣಿಯನ್ನು ಆಸ್ಪತ್ರೆಗೆ ಸೇರಿಸಿದ್ರು: ಬಯಲಾಯಿತು ಮತ್ತೊಂದು ಮನಕಲಕುವ ಘಟನೆ - Mahanayaka
12:15 PM Saturday 21 - September 2024

ಡೋಲಿಯಲ್ಲಿ ಮಲಗಿಸಿ 20 ಕಿ.ಮೀ. ಹೆಗಲ ಮೇಲೆ ಹೊತ್ತೊಯ್ದು ಗರ್ಭೀಣಿಯನ್ನು ಆಸ್ಪತ್ರೆಗೆ ಸೇರಿಸಿದ್ರು: ಬಯಲಾಯಿತು ಮತ್ತೊಂದು ಮನಕಲಕುವ ಘಟನೆ

07/09/2023

ದೇಶದಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಕುಗ್ರಾಮವೊಂದರ ಬುಡಕಟ್ಟು ಸಮುದಾಯದ ತುಂಬು ಗರ್ಭಿಣಿಯನ್ನು ಡೋಲಿಯಲ್ಲಿ ಮಲಗಿಸಿಕೊಂಡು 20 ಕಿ.ಮೀ. ಹೆಗಲ ಮೇಲೆ ಹೊತ್ತೊಯ್ದಿರುವ ಮನಕಲಕುವ ಘಟನೆ ತೆಲಂಗಾಣದ ಭದ್ರಾದ್ರಿ-ಕೊಥಗುಡೆಂ ಜಿಲ್ಲೆಯ ಬೋಧನಿಲ್ಲಿ ಗ್ರಾಮ ಪಂಚಾಯತ್‌ನ ಕೊರ್ಕಟ್‌ಪಾಡು ಗ್ರಾಮದಲ್ಲಿ
ನಡೆದಿದೆ.

ಆ ಊರಿಗೆ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಹೆರಿಗೆಗೆ ಆಸ್ಪತ್ರೆಗೆ ಹೋಗಲು ಪರದಾಡುತ್ತಿದ್ದ ಗರ್ಭಿಣಿಯನ್ನು ಆ ಊರಿನ ಗ್ರಾಮಸ್ಥರು ಡೋಲಿಯಲ್ಲಿ ಮಲಗಿಸಿಕೊಂಡು ಬೆಟ್ಟವನ್ನು ಹತ್ತಿ ಕಾಡಿನಲ್ಲಿ ನಡೆದುಕೊಂಡು ಆಸ್ಪತ್ರೆ ತಲುಪಿಸಿದ್ದಾರೆ.
ಗ್ರಾಮಸ್ಥರು ತಮ್ಮ ಹೆಗಲ ಮೇಲೆ ‘ಡೋಲಿ’ಯಲ್ಲಿ ಗರ್ಭಿಣಿ ಮಹಿಳೆಯನ್ನು ಹೊತ್ತು ಹೋಗಿದ್ದಾರೆ. ಸುರಿಯುತ್ತಿರುವ ಮಳೆಯಲ್ಲೇ ಆಕೆಯನ್ನು ಹೆಗಲಲ್ಲಿ ಎತ್ತಿಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಗ್ರಾಮಸ್ಥರು ತಮ್ಮ ಗ್ರಾಮದಿಂದ ಸುಮಾರು 20 ಕಿಮೀ ದೂರದಲ್ಲಿರುವ ಸತ್ಯನಾರಾಯಣಪುರಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡೋಲಿಯಲ್ಲಿ ಆ ಮಹಿಳೆಯನ್ನು ಹೊತ್ತುಕೊಂಡು ಮಳೆನೀರು ತುಂಬಿದ ಪ್ರದೇಶಗಳಲ್ಲಿ ಸಂಚರಿಸುವುದನ್ನು ಸಹ ಕಾಣಬಹುದು.


Provided by

22 ವರ್ಷದ ಮರಕ್ಕಮ್ ಕೋಸಿ ಎಂಬ ಗರ್ಭಿಣಿ ಹೆರಿಗೆ ನೋವಿನಿಂದ ನರಳುತ್ತಿದ್ದರು. ಆಗ ಆಕೆಯ ನೆರವಿಗೆ ಬಂದ ಗ್ರಾಮಸ್ಥರು ಎರಡು ಬಿದಿರಿನ ತುಂಡಿಗೆ ಬಟ್ಟೆಯನ್ನು ಕಟ್ಟಿ ಡೋಲಿ ಮಾಡಿಕೊಂಡು, ಅದರಲ್ಲಿ ಆಕೆಯನ್ನು ಮಲಗಿಸಿಕೊಂಡು ಆಸ್ಪತ್ರೆಗೆ ನಡೆದುಕೊಂಡು ಹೋಗಿದ್ದಾರೆ.

ಅಂದಹಾಗೇ ಈ ಗ್ರಾಮದ ಗರ್ಭಿಣಿಯನ್ನು ಹತ್ತಿರದ ಆಸ್ಪತ್ರೆಗೆ ‘ಡೋಲಿ’ಯಲ್ಲಿ ಹೊತ್ತುಕೊಂಡು ಹೋಗಿದ್ದು ಇದೇ ಮೊದಲಲ್ಲ. ಛತ್ತೀಸ್‌ಗಢದ ಗಡಿಗೆ ಸಮೀಪದಲ್ಲಿರುವ ಈ ಪ್ರದೇಶದ ಸುಮಾರು 25 ಬುಡಕಟ್ಟು ಹಳ್ಳಿಗಳಿಗೆ ರಸ್ತೆ ಸಂಪರ್ಕ ಇಲ್ಲ. ಕೊರ್ಕಟ್‌ಪಾಡು ಕುಗ್ರಾಮವು ಸುಮಾರು 40 ಬುಡಕಟ್ಟು ಕುಟುಂಬಗಳನ್ನು ಹೊಂದಿದ್ದು, ಒಟ್ಟು 200 ಜನಸಂಖ್ಯೆಯನ್ನು ಹೊಂದಿದೆ.

ಆ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಕೆಲವೇ ಗಂಟೆಗಳಲ್ಲಿ ಆಕೆಗೆ ಹೆರಿಗೆಯಾಗಿದೆ. ರಕ್ತದೊತ್ತಡ ಹೆಚ್ಚಾಗಿದ್ದರಿಂದ ಸಿಸೇರಿಯನ್ ಮೂಲಕ ಆಕೆಗೆ ಹೆರಿಗೆ ಮಾಡಿಸಲಾಯಿತು. 2.6 ಕೆಜಿ ತೂಕದ ಆರೋಗ್ಯವಂತ ಗಂಡು ಮಗುವಿಗೆ ಈ ಮಹಿಳೆ ಜನ್ಮ ನೀಡಿದ್ದಾರೆ.

ಇತ್ತೀಚಿನ ಸುದ್ದಿ