ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಹರಿದ ಬಸ್: ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರ

ಚಿಕ್ಕಮಗಳೂರು: ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಶಾಲಾ ಮಕ್ಕಳ ಮೇಲೆ ಖಾಸಗಿ ಬಸ್ಸೊಂದು ಹರಿದ ಪರಿಣಾಮ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡ ಆತಂಕಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರ ಗೇಟ್ ನಲ್ಲಿ ನಡೆದಿದೆ.
ತುಳಸಿ (15) ನಿವೇದಿತ (14) ಎಂಬ ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದೆ. ಇವರನ್ನು ತಕ್ಷಣವೇ ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ರವಾನಿಸಲಾಗಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ಐವರು ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಓವರ್ ಸ್ಪೀಡ್ ನಿಂದ ಕಂಟ್ರೋಲ್ ತಪ್ಪಿದ ಖಾಸಗಿ ಬಸ್ ರಸ್ತೆ ಬದಿಗೆ ಸರಿದು ಸಮೀಪದಲ್ಲಿದ್ದ ಮನೆಗಳ ಕಡೆಗೆ ನುಗ್ಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮನೆಯೊಂದರ ಮೇಲ್ಛಾವಣಿ ಸಂಪೂರ್ಣವಾಗಿ ಹಾನಿಯಾಗಿದೆ.
ನಿಯಂತ್ರಣ ತಪ್ಪಿದ ಬಸ್ ಕಂಡು ರಸ್ತೆ ಬದಿ ಇದ್ದ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆದರೆ ಇಬ್ಬರು ವಿದ್ಯಾರ್ಥಿನಿಯರು ಅಪಘಾತಕ್ಕೆ ಸಿಲುಕಿದ್ದಾರೆ. ಘಟನಾ ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.