ಅನ್ಯಾಯ ಮುಂದುವರಿದರೆ ಸ್ವತಂತ್ರ ಪಕ್ಷ ಕಟ್ಟಲೂ ಅತಿ ಹಿಂದುಳಿದವರು ಸಿದ್ಧ: ಪ್ರಣವಾನಂದ ಸ್ವಾಮೀಜಿ
ಬೆಂಗಳೂರು: ರಾಜ್ಯದಲ್ಲಿ ಅತಿ ಹಿಂದುಳಿದ ವರ್ಗಗಳ (ಎಂಬಿಸಿ) ಜನರಿಗೆ ಆಗುತ್ತಿರುವ ಅನ್ಯಾಯ ಇನ್ನೂ ಮುಂದುವರಿದರೆ ಸ್ವತಂತ್ರ ಪಕ್ಷ ಕಟ್ಟಿ, ರಾಜಕೀಯ ನಡೆಸುವುದಕ್ಕೂ ಅತಿ ಹಿಂದುಳಿದ ವರ್ಗಗಳು ಸಿದ್ಧ ಎಂದು
ರಾಷ್ಟ್ರೀಯ ಈಡಿಗ ಮಹಾಮಂಡಳಿ ಅಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಸೆಪ್ಟೆಂಬರ್ 9ರಂದು ನಗರದ ಅರಮನೆ ಮೈದಾನದಲ್ಲಿ ನಡೆಯುವ ಈಡಿಗ, ಬಿಲ್ಲವ, ನಾಮಧಾರಿ, ಧೀವರು ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆಯ ಸಿದ್ಧತೆಯನ್ನು ಗುರುವಾರ ಪರಿಶೀಲನೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸೆಪ್ಟೆಂಬರ್ 9ರ ಸಭೆ ಅತಿ ಹಿಂದುಳಿದ ವರ್ಗಗಳ ಜನರು ಸಾಮಾಜಿಕ ನ್ಯಾಯ ಪಡೆಯಲು ಆರಂಭಿಸುವ ಹೋರಾಟದ ವಿಷಯದಲ್ಲಿ ಐತಿಹಾಸಿಕ ತೀರ್ಮಾನಗಳನ್ನು ತೆಗೆದುಕೊಳ್ಳಲಿದೆ. ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳ ಎಲ್ಲ ಸಮುದಾಯಗಳ ಜನರಿಗೆ ನ್ಯಾಯ ದೊರಕುವವರೆಗೂ ಹೋರಾಟ ನಡೆಸುವ ನಿರ್ಣಯಕ್ಕೆ ಸಭೆ ವೇದಿಕೆಯಾಗಲಿದೆ ಎಂದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹೆಸರಿನಲ್ಲಿ ರಾಜಕೀಯ ನಡೆಸಿ, ಅಧಿಕಾರಕ್ಕೆ ಬಂದು ಯಾವುದೋ ಒಂದು ಸಮುದಾಯದ ಪರವಾಗಿ ಮಾತ್ರ ಕೆಲಸ ಮಾಡುವುದು ಹೆಚ್ಚುತ್ತಿದೆ. ಈ ರೀತಿ ಅತಿ ಹಿಂದುಳಿದ ಜನರನ್ನು ಶೋಷಿಸುವುದು ನಿಲ್ಲಬೇಕು. ದೇಶದಲ್ಲಿ ಶೇಕಡ 60ರಷ್ಟು ಮಂದಿ ಹಿಂದುಳಿದ ವರ್ಗಗಳ ಜನರಿದ್ದಾರೆ. ಅವರಿಗೆ ನ್ಯಾಯ ಎಲ್ಲಿ ದೊರಕುತ್ತಿದೆ ಎಂದು ಪ್ರಶ್ನಿಸಿದರು.
ಕೆಪಿಎಸ್ಸಿ ನಡೆಸಿರುವ ನೇಮಕಾತಿಗಳ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದು ನೋಡಿದರೆ ಗೊತ್ತಾಗುತ್ತದೆ. ಹಿಂದುಳಿದ ವರ್ಗಗಳಿಗೆ ಮೀಸಲಾದ ಹುದ್ದೆಗಳಲ್ಲಿ ಶೇಕಡ 90ರಷ್ಟು ಒಂದೇ ಸಮುದಾಯಕ್ಕೆ ಸಿಕ್ಕಿವೆ. ಉಳಿದವರಿಗೆ ನ್ಯಾಯವೇ ಇಲ್ಲವಾಗಿದೆ ಎಂದು ದೂರಿದರು.
ರಾಜಕೀಯವಾಗಿಯೂ ಹಿಂದುಳಿದ ವರ್ಗಗಳ ನಾಯಕರನ್ನು ತುಳಿಯುವ ಪ್ರಯತ್ನ ನಡೆದಿದೆ. ಶಿವಮೂರ್ತಿ ನಾಯ್ಕ್, ಕೆ.ಸಿ. ಕೊಂಡಯ್ಯ ಸೇರಿದಂತೆ ಹಲವರನ್ನು ತುಳಿಯಲಾಗಿದೆ. ಈಗ ರಾಜ್ಯ ರಾಜಕಾರಣದಲ್ಲಿ ಈಡಿಗ ಸಮುದಾಯದ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆದಿದೆ. ಅದಕ್ಕೆ ಜಯ ಸಿಗುವುದಿಲ್ಲ. ನಮ್ಮ ಸಮುದಾಯದ ಎಸ್. ಬಂಗಾರಪ್ಪ, ಆರ್.ಎಲ್. ಜಾಲಪ್ಪ ಅವರಿಗೂ ಇದೇ ರೀತಿ ಮಾಡಿದ್ದರು ಎಂದರು.
ರಾಜಕೀಯದಲ್ಲಿನಾನೊಬ್ಬನೇ, ಎಲ್ಲವೂ ನನ್ನದೇ ಎಂಬ ಏಕಚಕ್ರಾಧಿಪತ್ಯ ನಡೆಯುವುದಿಲ್ಲ. ಕಾಲಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕು. ಬದಲಾವಣೆ ಆಗಿಯೇ ಆಗುತ್ತದೆ. ಸಾಮಾಜಿಲ ನ್ಯಾಯ, ಸಾಮಾಜಿಕ ಪರಿವರ್ತನೆ ಎಲ್ಲವೂ ಬೇಕು ಎಂದು ಸ್ವಾಮೀಜಿ ಹೇಳಿದರು.
ಅಹಿಂದ ಹೋರಾಟಕ್ಕೆ ಈಡಿಗ ಸಮುದಾಯದ ಆರ್.ಎಲ್. ಜಾಲಪ್ಪ ಮತ್ತು ಜೆ.ಪಿ.ನಾರಾಯಣ ಸ್ವಾಮಿ ಆರ್ಥಿಕ ಬೆಂಬಲ ನೀಡಿದ್ದರು. ಈಗ ಅತಿ ಹಿಂದುಳಿದ ವರ್ಗಗಳ ಹೋರಾಟಕ್ಕೂ ಈಡಿಗ, ಬಿಲ್ಲವ, ನಾಮಧಾರಿ, ಧೀವರ ಸಮುದಾಯ ದೊಡ್ಡ ಬೆಂಬಲ ನೀಡುತ್ತಿದೆ. ಧ್ವನಿ ಇಲ್ಲದ ಸಮುದಾಯಗಳ ಪರ ಹೋರಾಟದ ನೇತೃತ್ವವನ್ನು ನಮ್ಮ ಸಮುದಾಯ ವಹಿಸಲಿದೆ ಎಂದರು.
ಈಡಿಗರು ಸೇರಿದಂತೆ ಅತಿ ಹಿಂದುಳಿದ ವರ್ಗಗಳ ಜನರನ್ನು ತುಳಿದು ರಾಜಕಾರಣ ಮಾಡುವುದು ಹೆಚ್ಚು ದಿನ ನಡೆಯುವುದಿಲ್ಲ. ರಾಜ್ಯದ ಕರಾವಳಿ ಮತ್ತು ಮಲೆನಾಡಿನ 24 ವಿಧಾಸಭಾ ಕ್ಷೇತ್ರಗಳಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ಧೀವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅತಿ ಹಿಂದುಳಿದ ವರ್ಗಗಳ ಸ್ವತಂತ್ರ ಪಕ್ಷ ಕಟ್ಟಿ ಅಲ್ಲಿ ನಾವೇ ಏಕೆ ಸ್ಪರ್ಧಿಸಬಾರದು ಎಂಬ ಚಿಂತನೆಯೂ ನಡೆದಿದೆ ಎಂದರು.
ಹಿಂದುಳಿದ ವರ್ಗಗಳ ಮಠಗಳಿಗೆ ಅನುದಾನ ಮತ್ತು ಜಮೀನು ನೀಡಿರುವ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಲಿ. ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಏಕೆ ಅನುದಾನ ನೀಡಿಲ್ಲ ಎಂಬುದಕ್ಕೆ ಉತ್ತರ ನೀಡಲಿ ಎಂದು ಆಗ್ರಹಿಸಿದರು.
ಶನಿವಾರದ ಸಭೆಯಲ್ಲಿ ಹನ್ನೊಂದು ರಾಜ್ಯಗಳ ಅತಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬಿ.ಕೆ. ಹರಿಪ್ರಸಾದ್, ಆಂಧ್ರಪ್ರದೇಶದ ಸಚಿವ ಜೋಗಿ ರಮೇಶ್ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಪ್ರಶ್ನೋತ್ತರ:
ಕುರುಬರೂ ಸೇರಿದಂತೆ ಯಾವ ಸಮುದಾಯದ ವಿರುದ್ಧವೂ ನಾವು ಇಲ್ಲ . ಕುರುಬರಲ್ಲೂ ಅತಿ ಹಿಂದುಳಿದ ಜನರಿದ್ದಾರೆ. ಕುರುಬ ಸಮುದಾಯದ ಕೆಲವು ನಾಯಕರು ಕೂಡ ಸಭೆಗೆ ಬರುತ್ತಾರೆ.
ಇದು ಸರ್ಕಾರದ ವಿರುದ್ಧದ ಸಭೆ ಅಲ್ಲ. ಅತಿ ಹಿಂದುಳಿದ ವರ್ಗಗಳ ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ನಡೆಸುತ್ತಿರುವ ಸಭೆ. ಈ ಹೋರಾಟವನ್ನು ಕಡೆಗಣಿಸಿದರೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುದು ಎಂದು ಹೇಳಿದರು.
ಈಡಿಗ, ಬಿಲ್ಲವ, ನಾಮಧಾರಿ, ಧೀವರು ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆಯ ಸ್ವಾಗತ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಮಾತನಾಡಿ, ಶನಿವಾರ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಐತಿಹಾಸಿಕ ಸಭೆ. ಅತಿ ಹಿಂದುಳಿದ ವರ್ಗಗಳ ಜನರಿಗೆ ನ್ಯಾಯ ದೊರಕಿಸಲು ದೊಡ್ಡ ಹೋರಾಟಕ್ಕೆ ಈ ಸಭೆ ನಾಂದಿ ಹಾಡಲಿದೆ ಎಂದರು.
ಅಹಿಂದ ಹೆಸರಿನಲ್ಲಿ ನಮ್ಮನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿ ಈಗ ಅತಿ ಹಿಂದುಳಿದ ವರ್ಗಗಳ ಪ್ರತ್ಯೇಕ ಹೋರಾಟದ ಮೂಲಕ ನ್ಯಾಯ ಪಡೆಯಲು ಹೊರಟಿದ್ದೇವೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಹಿಂದುಳಿದ, ಅದರಲ್ಲೂ ವಿಶೇಷವಾಗಿ ಅತಿ ಹಿಂದುಳಿದ ವರ್ಗಗಳ ಬೆಂಬಲ ಕಾರಣ. ಈ ವರ್ಗಗಳ ಜನರಿಗೆ ನ್ಯಾಯ ನೀಡದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಅವರು ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದರು.