ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ - Mahanayaka
12:30 PM Tuesday 4 - February 2025

ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

dk shivakumar
09/09/2023

ಬೆಂಗಳೂರು:“ಜೆಡಿಎಸ್ ಏಕಾಂಗಿಯಾಗಿಯಾದರೂ ಚುನಾವಣೆ ಸ್ಪರ್ಧಿಸಲಿ, ಬಿಜೆಪಿ ಜೊತೆ ಮೈತ್ರಿಯಾದರೂ ಮಾಡಿಕೊಳ್ಳಲಿ. ನಾವು ಆ ಬಗ್ಗೆ ಹಿಂದೆಯೂ ತಲೆ ಕೆಡಿಸಿಕೊಂಡಿಲ್ಲ, ಮುಂದೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳು ಶನಿವಾರ, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಪ್ರಾರಂಭವಾಗಿದೆ, ಅವರು ನಮ್ಮ ಮೈತ್ರಿ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾವು ಅವರ ಸುದ್ದಿಗೆ ಹೋಗಿಲ್ಲ. ಈ ಹಿಂದೆ ಹಿರಿಯರಾದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಏಕಾಂಗಿಯಾಗಿ ಹೋರಾಡುತ್ತೇವೆ ಎಂದಿದ್ದರು. ಹಾಗೆಂದಿದ್ದ ಅವರ ಮಾತು, ಅವರ ಸಿದ್ಧಾಂತ ಈಗ ಎಲ್ಲಿ ಹೋಯಿತು? ದೇವೇಗೌಡರು ಹಾಗೂ ಕುಮಾರಸ್ವಾಮಿ ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು, ನಿಲುವುಗಳನ್ನು ಮಾಧ್ಯಮದವರು ಕೇಳಬೇಕು” ಎಂದರು.

“ಜೆಡಿಎಸ್ ಬಿಜೆಪಿ ಮೈತ್ರಿಗೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಅವರ ರಾಜಕೀಯ ನಿಲುವುಗಳ ಬಗ್ಗೆ ಯಾವ ನಾಯಕರು ಪ್ರತಿಕ್ರಿಯೆ ನೀಡಬೇಕೋ ಅವರು ನೀಡುತ್ತಾರೆ. ಅವರ ರಾಜಕೀಯ ಅಸ್ತಿತ್ವಕ್ಕಾಗಿ ಅವರು ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ” ಎಂದು ತಿಳಿಸಿದರು.

2018 ರಲ್ಲಿ ಮೈತ್ರಿ ಮಾಡಿಕೊಳ್ಳುವಾಗ ರೊಟ್ಟಿ ಹಳಸಿರಲಿಲ್ಲವೇ ? ಈಗ ಕಾಂಗ್ರೆಸ್ಸಿನವರು ಮಾತನಾಡುತ್ತಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಅವರ ಬಗ್ಗೆ ಮೊದಲ ದಿನದಿಂದಲೂ ನಮಗೆ ಗೊತ್ತು. ಒಂದೊಂದು ದಿನ ಒಂದೊಂದು ಮಾತನಾಡುತ್ತಿದ್ದಾರೆ? ಅವರು ಮಾತನಾಡುತ್ತಲೇ ಇರಲಿ. ನಾನು ಕೇಳಿದ ಪ್ರಶ್ನೆಗಳಿಗೆ ಮೊದಲು ಅವರ ಬಳಿ ಉತ್ತರ ಕೇಳಿ” ಎಂದರು.

ಇತ್ತೀಚಿನ ಸುದ್ದಿ