ಕೋಟಾದಲ್ಲಿ 16 ವರ್ಷದ ನೀಟ್ ಆಕಾಂಕ್ಷಿ ಆತ್ಮಹತ್ಯೆ: ಈ ವರ್ಷದಲ್ಲಿ ನಡೆದ 25 ನೇ ಸಾವು ಪ್ರಕರಣ ಇದು..! - Mahanayaka
1:06 PM Saturday 21 - September 2024

ಕೋಟಾದಲ್ಲಿ 16 ವರ್ಷದ ನೀಟ್ ಆಕಾಂಕ್ಷಿ ಆತ್ಮಹತ್ಯೆ: ಈ ವರ್ಷದಲ್ಲಿ ನಡೆದ 25 ನೇ ಸಾವು ಪ್ರಕರಣ ಇದು..!

13/09/2023

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಗೆ ತಯಾರಿ ನಡೆಸುತ್ತಿದ್ದ 16 ವರ್ಷದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಈ ವರ್ಷ ಕೇವಲ ಎಂಟು ತಿಂಗಳಲ್ಲಿ ರಾಜಸ್ಥಾನದ ಕೋಚಿಂಗ್ ಕೇಂದ್ರವಾದ ಕೋಟಾದಲ್ಲಿ ಇಪ್ಪತ್ತೈದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಂಚಿ ನಿವಾಸಿಯಾದ ಈ ವಿದ್ಯಾರ್ಥಿನಿಯು ಪ್ರಸ್ತುತ ನಗರದ ಬ್ಲೇಜ್ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದಳು. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಈಕೆಯ ಶವವನ್ನು ಶವಾಗಾರದಲ್ಲಿ ಇಡಲಾಗಿದೆ.

ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಹತೆ ಪಡೆಯುವ ಭರವಸೆಯೊಂದಿಗೆ ಪ್ರತಿವರ್ಷ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು ಕೋಟಾಕ್ಕೆ ಬರುತ್ತಾರೆ.


Provided by

ಈ ವರ್ಷ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡಕ್ಕೆ ಸಂಬಂಧಿಸಿದಂತೆ 25 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

ರಾಜಸ್ಥಾನ ಪೊಲೀಸರ ಅಂಕಿಅಂಶಗಳ ಪ್ರಕಾರ, ಈ ಸಂಖ್ಯೆ 2022 ರಲ್ಲಿ 15, 2019 ರಲ್ಲಿ 18, 2018 ರಲ್ಲಿ 20, 2017 ರಲ್ಲಿ ಏಳು, 2016 ರಲ್ಲಿ 17 ಮತ್ತು 2015 ರಲ್ಲಿ 18 ಆಗಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕೋಚಿಂಗ್ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದರಿಂದ 2020 ಮತ್ತು 2021 ರಲ್ಲಿ ಕೋಟಾದಲ್ಲಿ ಯಾವುದೇ ವಿದ್ಯಾರ್ಥಿ ಆತ್ಮಹತ್ಯೆ ವರದಿಯಾಗಿಲ್ಲ.

ಕೋಟಾದಲ್ಲಿ ಸರಣಿ ಆತ್ಮಹತ್ಯೆಗಳಿಗೆ ನಡೆಯುತ್ತಿರುವುದನ್ನು ನೋಡಿ, ಜಿಲ್ಲಾಡಳಿತವು ಈ ಹಿಂದೆ ಎಲ್ಲಾ ಹಾಸ್ಟೆಲ್ ಕೊಠಡಿಗಳು ಮತ್ತು ಪೇಯಿಂಗ್ ಗೆಸ್ಟ್ ವಸತಿಗಳಲ್ಲಿ ಸ್ಪ್ರಿಂಗ್ ಲೋಡ್ ಫ್ಯಾನ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು.

ಕೋಟಾ ಜಿಲ್ಲಾಧಿಕಾರಿ ಓಂ ಪ್ರಕಾಶ್ ಬುಂಕರ್ ಹೊರಡಿಸಿದ ಆದೇಶದಲ್ಲಿ “ಈ ವಸತಿಗಳಲ್ಲಿ ಅಧ್ಯಯನ ಮಾಡುವ ಮತ್ತು ವಾಸಿಸುವ ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಮತ್ತು ಭದ್ರತೆಯನ್ನು ಒದಗಿಸುವ ಮತ್ತು ಕೋಚಿಂಗ್ ವಿದ್ಯಾರ್ಥಿಗಳ ಆತ್ಮಹತ್ಯೆಗಳನ್ನು ತಡೆಯುವ” ಗುರಿಯನ್ನು ಹೊಂದಿದೆ.

ಏತನ್ಮಧ್ಯೆ, ರಾಜಸ್ಥಾನ ಹೈಕೋರ್ಟ್ ರಾಜ್ಯದ ಕೋಚಿಂಗ್ ಸಂಸ್ಥೆಗಳಲ್ಲಿ, ವಿಶೇಷವಾಗಿ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಗಟ್ಟುವ ಬಗ್ಗೆ ಶಿಫಾರಸುಗಳನ್ನು ಕೇಳಿದೆ. ಮಕ್ಕಳ ಮಾನಸಿಕ ಸಮಾಲೋಚನೆಯ ಮೇಲೆ ಗಮನ ಹರಿಸುವ ಅಗತ್ಯವನ್ನು ನ್ಯಾಯಾಲಯವು ಈ ಹಿಂದೆ ಒತ್ತಿ ಹೇಳಿತ್ತು.

ಇತ್ತೀಚಿನ ಸುದ್ದಿ