ಚಾರ್ಮಾಡಿಘಾಟ್ ನಲ್ಲಿ ಮಂಜು ಮುಸುಕಿದ ವಾತಾವರಣ: ಪ್ರಪಾತಕ್ಕೆ ಉರುಳಿದ ಲಾರಿ
ಕೊಟ್ಟಿಗೆಹಾರ: ಕೊಟ್ಟಿಗೆಹಾರ ಚಾರ್ಮಾಡಿ ಘಾಟ್ ಸುತ್ತಮುತ್ತ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಚಾರ್ಮಾಡಿ ಘಾಟ್ ನಲ್ಲಿ ಮಂಜು ಮುಸುಕಿದ ವಾತಾವರಣವಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಶುಕ್ರವಾರ ರಾತ್ರಿ ನೀರಿನ ಬಾಟಲ್ ತುಂಬಿದ ಲಾರಿ ಒಂದು ಮಂಜಿನಿಂದ ದಾರಿ ಕಾಣದೆ 100 ಅಡಿ ಪ್ರಪಾತಕ್ಕೆ ಬಿದ್ದಿದೆ ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಗೆ ಯಾವುದೇ ಪ್ರಾಣಪಾಯವಾಗಿಲ್ಲ.
ಲಾರಿ ಬಿದ್ದ ಜಾಗದಲ್ಲಿ ಬೃಹದಾಕಾರದ ಮರವಿದ್ದು ಆ ಮರಕ್ಕೆ ಲಾರಿ ತಗಲಿ ನಿಂತಿದೆ ಆ ಮರ ಇಲ್ಲದಿದ್ದರೆ ಸಾವಿರ ಅಡಿ ಪ್ರಪಾತಕ್ಕೆ ಲಾರಿ ಹೋಗಿ ಬೀಳುತ್ತಿತ್ತು.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಘಟನೆ ನಡೆದಿದೆ. ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಪಾತಕ್ಕೆ ಬೀಳುತ್ತಿದ್ದ ಲಾರಿಯನ್ನು ತಡೆದ ದೊಡ್ಡ ಮರ ಇಬ್ಬರ ಜೀವ ಉಳಿಸಿದೆ.
ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲಿ ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾದ ಲಾರಿಯಾಗಿದೆ. ಸ್ಥಳೀಯರು ಲಾರಿ ಚಾಲಕ ಹಾಗೂ ಕ್ಲೀನರ್ ನ್ನು ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.