ಕಾರ್ಖಾನೆಯಲ್ಲಿ ಖಾಯಂ ನೌಕರಿ ಸಿಗದಿದ್ದಕ್ಕೆ ಮನನೊಂದು ಯುವಕ ಸಾವಿಗೆ ಶರಣು

ಚಾಮರಾಜನಗರ: ಕಾರ್ಖಾನೆಯಲ್ಲಿ ಖಾಯಂ ನೌಕರಿ ಸಿಗದಿದ್ದಕ್ಕೆ ಮನನೊಂದು ಯುವಕನೋರ್ವ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದ ಹೇಮರಾಜು(28) ಮೃತ ಯುವಕ. ಈತ ಜಮೀನಿನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ವಿಚಾರವನ್ನು ಸ್ಥಳೀಯರು ಬೇಗೂರು ಪೊಲೀಸರಿಗೆ ತಿಳಿಸಿದ ಕೂಡಲೇ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಬೇಗೂರಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಮೃತ ಹೇಮರಾಜು ತೊಂಡವಾಡಿ ಗ್ರಾಮದ ಸಮೀಪವಿರುವ ಗ್ರೀನ್ ಪ್ರೋ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲಸ ನಿರ್ವಹಿಸುವ ವೇಳೆ ಬಲಗೈ ಬೆರಳು ತುಂಡಾಗಿತ್ತು. ನಂತರ, ಕಂಪೆನಿಯವರು ಖಾಯಂ ನೌಕರಿ ನೀಡುವುದಾಗಿ ಒಪ್ಪಿಕೊಂಡಿದ್ದರು.
ಕೆಲತಿಂಗಳು ಕಳೆದರು ಖಾಯಂ ನೌಕರಿ ನೀಡದ ಹಿನ್ನಲೆ ಬೇಸತ್ತ ಹೇಮರಾಜು ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಮೃತ ಹೇಮರಾಜು ಅಣ್ಣ ಪ್ರಸಾದ್ ದೂರು ನೀಡಿದ್ದಾರೆ. ದೂರಿನನ್ವಯ ಗ್ರೀನ್ ಪ್ರೋ ಕಂಪೆನಿಯ ಹೆಚ್.ಆರ್. ರತೀಶ್, ಜೋಷಿಬಲ್, ರಾಧಾಕೃಷ್ಣನ್ ಎಂಬ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡ ಬೇಗೂರು ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.