ಅಂತ್ಯಸಂಸ್ಕಾರದ ವೇಳೆ ಹೆಜ್ಜೇನು ದಾಳಿ: 10 ಮಂದಿ ವೃದ್ಧರಿಗೆ ಗಾಯ
ಚಾಮರಾಜನಗರ: ಅಂತ್ಯಸಂಸ್ಕಾರದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ 10 ಮಂದಿ ವೃದ್ಧರು ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಬಿ.ಗುಂಡಾಪುರ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಗುಂಡಾಪುರ ಗ್ರಾಮದಲ್ಲಿ ನಿಧನ ಹೊಂದಿದ್ದ ದೊಡ್ಡಮಲ್ಲಯ್ಯ ಅವರ ಶವಸಂಸ್ಕಾರ ಮುಗಿಸಿ ಹಿಂತಿರುಗುವಾಗ ಹೆಜ್ಜೇನುಗಳು ಜನರ ಮೇಲೆ ದಾಳಿ ನಡೆಸಿವೆ.
ಗಾಯಗೊಂಡವರಲ್ಲಿ ಎಲ್ಲರೂ ವೃದ್ಧರಾಗಿದ್ದು ಇಬ್ಬರನ್ನು ಕಾಮಗೆರೆಯ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ದಾಖಲು ಮಾಡಲಾಗಿದ್ದು ಏಳು ಮಂದಿ ಒಳರೋಗಿಗಳಾಗಿ ದಾಖಲಾಗಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಮೂರು ದಿನಗಳ ಹಿಂದೆಯೂ ನಡೆದಿತ್ತು ದಾಳಿ:
ಕೊಂಗರಹಳ್ಳಿ ಗ್ರಾಮದಲ್ಲಿ ಕಳೆದ ಭಾನುವಾರ ಶವಸಂಸ್ಕಾರಕ್ಕೆ ತೆರೆಳಿದ್ದ ಜನರ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಚೆನ್ನಪ್ಪ(60) ಎಂಬುವವರು ಮೃತಪಟ್ಟು 10 ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ದರು.
ಕೊಂಗರಹಳ್ಳಿ ಗ್ರಾಮದ ಮೂಡಲ ಬೀದಿಯ ಮಹಿಳೆಯೊಬ್ಬರ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ವೇಳೆ ಶವಕ್ಕೆ ಪೂಜೆ ಸಲ್ಲಿಸಿ ಬೆಂಕಿ ಹಚ್ಚುತ್ತಿದ್ದಂತೆ ಮರದ ಮೇಲಿದ್ದ ಹೆಜ್ಜೇನು ಸುಮಾರು 15 ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ಮಾಡಿದೆ. ಈ ಪೈಕಿ ಚೆನ್ನಪ್ಪ ಅವರು ಹೆಜ್ಜೇನು ದಾಳಿಗೆ ತುತ್ತಾಗಿ ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.