ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಬಂದರೂ ಮಗನನ್ನು ಕಂಡು ಹಿಡಿದ ತಾಯಿ!

ಮೂರು ವರ್ಷಗಳ ಬಳಿಕ ತಾಯಿನಾಡಿಗೆ ಮರಳಿದ ಯುವಕನೋರ್ವ ತನ್ನ ತಾಯಿಗೆ ಸರ್ಪ್ರೈಸ್ ನೀಡಲು ತೆರಳಿರುವ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಉಡುಪಿ ಜಿಲ್ಲೆಯ ಗಂಗೊಳ್ಳಿ ನಿವಾಸಿ ರೋಹಿತ್ ಮೂರು ವರುಷಗಳ ನಂತರ ದುಬೈನಿಂದ ತಾಯ್ನಾಡಿಗೆ ಮರಳಿದ್ದರು. ಮನೆಯವರಿಗೆ, ಮಿತ್ರರಿಗೆ ಸರ್ಪ್ರೈಸ್ ನೀಡುವ ನಿಟ್ಟಿನಿಂದ ತಾವು ಬರುವ ಕುರಿತು ಯಾವುದೇ ಮಾಹಿತಿ ನೀಡದೆ ಊರಿಗೆ ಬಂದಿದ್ದರು. ಮನೆಗೆ ಬಂದಾಗ ಎಲ್ಲರೂ ಇದ್ದರು, ಆದರೆ ತಾಯಿ ಮಾತ್ರ ಮನೆಯಲ್ಲಿ ಇರದೇ ಇರುವುದನ್ನು ಕಂಡು ಬೇಸರಗೊಂಡಿದ್ದರು. ಹೀಗಾಗಿ ನೇರವಾಗಿ ಗಂಗೊಳ್ಳಿ ಬಂದರು ಬಳಿ ತಾಯಿ ಮೀನು ಮಾರುವ ಸ್ಥಳಕ್ಕೆ ರೋಹಿತ್ ತೆರಳಿದ್ದಾರೆ.
ತಾಯಿ ಸುಮಿತ್ರ ಮೀನು ಮಾರುತ್ತಿದ್ದಲ್ಲಿಗೆ ತೆರಳಿದ್ದ ರೋಹಿತ್ ತಲೆಗೆ ಟೋಪಿ ಹಾಕಿ ಮುಖಕ್ಕೆ ಕರವಸ್ತ್ರ ಕಟ್ಟಿ ಕನ್ನಡಕ ಹಾಕಿ ಮೀನು ಖರೀದಿಸುವಂತೆ ರೋಹಿತ್ ನಾಟಕವಾಡಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಈತ ತನ್ನ ಮಗ ಎಂದು ಹೆತ್ತ ತಾಯಿ ಅರಿತುಕೊಂಡಿದ್ದಾರೆ. ತಕ್ಷಣವೇ ಕರವಸ್ತ್ರವನ್ನು ಸರಿಸಿದ ತಾಯಿ ಮಗನನ್ನು ಕಂಡು ಆನಂದ ಭಾಷ್ಪ ಸುರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮೂರು ವರ್ಷಗಳ ಬಳಿಕ ಮಗ ಮುಖ ಮರೆಮಾಡಿಕೊಂಡು ಬಂದರು, ಕೂಡ ತಾಯಿ ಮಗನನ್ನು ಗುರುತಿಸಿರುವುದು ನೆಟ್ಟಿಗರಿಗೆ ಸಖತ್ ಇಷ್ಟವಾಗಿದ್ದು, ತಾಯಿ ಮಗನ ಹೆಸರಿನಲ್ಲಿ ವಿಡಿಯೋ ವೈರಲ್ ಆಗುತ್ತಿದೆ.