ಅಸಹಜ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ: ಲಿವ್ ಇನ್ ಸಂಗಾತಿಯ ದೂರಿನ ಬೆನ್ನಲ್ಲೇ ಯುವಕ ಅರೆಸ್ಟ್
ವಿವಾಹವಾಗುವುದಾಗಿ ನಂಬಿಸಿ ತನ್ನ ಲಿವ್ ಇನ್ ಸಂಗಾತಿಗೆ ಅಸಹಜ ಲೈಂಗಿಕ ದೌರ್ಜನ್ಯ ಹಾಗೂ ಬಲವಂತದ ಮತಾಂತರಕ್ಕೆ ಯತ್ನಿಸಿದ ಆರೋಪದಲ್ಲಿ ಟೆಕ್ಕಿಯೋರ್ವನ್ನು ಬಂಧಿಸಲಾಗಿದೆ.
ಮೊಗಿಲ್ ಅಶ್ರಫ್ ಬೇಗ್(32) ಬಂಧಿತ ಆರೋಪಿಯಾಗಿದ್ದಾನೆ. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿ ಈತ ಸಂತ್ರಸ್ತೆಗೆ 2018ರಿಂದ ಪರಿಚಯವಿದ್ದ ಎನ್ನಲಾಗಿದೆ. ವರದಿಗಳ ಪ್ರಕಾರ ಈ ಜೋಡಿ ಮದುವೆಯಾಗಲು ಯೋಜಿಸಿದ್ದರು. ಆದರೆ ಅಶ್ರಫ್ ಬೇಗ್ ಆಕೆಯನ್ನು ಇಸ್ಲಾಮ್ ಗೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ. ಅಷ್ಟೇ ಅಲ್ಲದೇ ವಿವಾಹವಾಗುವುದಾಗಿ ನಂಬಿಸಿ ತನ್ನನ್ನು ಬಳಸಿಕೊಂಡಿದ್ದು, ತನ್ನೊಂದಿಗೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
ನಾನು ಲವ್ ಜಿಹಾದ್ ನ ಸಂತ್ರಸ್ತೆ, ನನ್ನ ಜೀವ ಅಪಾಯದಲ್ಲಿದೆ ಎಂದು ಟ್ವಿಟರ್ ನಲ್ಲಿ ಬರೆದಿರುವ ಸಂತ್ರಸ್ತೆ, ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದು, ಮಹಿಳೆ ದೂರು ನೀಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಹೆಬ್ಬಗೋಡಿ ಪೊಲೀಸ್ ಠಾಣೆ ಅಧಿಕಾರಿಗಳು 376 (ಅತ್ಯಾಚಾರ) 377 (ಅಸಹಜ ಅಪರಾಧಗಳು) 506 (ಕ್ರಿಮಿನಲ್ ಬೆದರಿಕೆ) ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.