ಮಾಜಿ ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಪೊಲೀಸ್ ವಶಕ್ಕೆ!
23/09/2023
ಬೆಂಗಳೂರು: ಕಾವೇರಿ ನೀರಿನ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರನ್ನು ವಶಕ್ಕೆ ಪಡೆಯಲಾಗಿದೆ.
ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಕಾಗೇರಿ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಬಿಜೆಪಿ ನಾಯಕರು ಖಾಲಿ ಕೊಡ ಹಾಗೂ ಬಿತ್ತಿ ಪತ್ರಗಳನ್ನು ಹಿಡಿದುಕೊಂಡು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಿಮಗೆ ಯೋಗ್ಯತೆ ಇದ್ದರೆ ಸಮಸ್ಯೆ ಪರಿಹಾರ ಮಾಡಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆಕ್ರೋಶ ಹೊರ ಹಾಕಿದರು.