ದಾರಿ ತಪ್ಪಿ ಕಾಡಿನೊಳಗೆ ಸೇರಿದ್ದ ಯುವಕ 8 ದಿನಗಳ ನಂತರ ಪತ್ತೆ: ಯುವಕನನ್ನು ಬಿಡದೇ ಹಿಂಬಾಲಿಸಿದ್ದ ಸಾಕು ನಾಯಿ - Mahanayaka

ದಾರಿ ತಪ್ಪಿ ಕಾಡಿನೊಳಗೆ ಸೇರಿದ್ದ ಯುವಕ 8 ದಿನಗಳ ನಂತರ ಪತ್ತೆ: ಯುವಕನನ್ನು ಬಿಡದೇ ಹಿಂಬಾಲಿಸಿದ್ದ ಸಾಕು ನಾಯಿ

vivekananda
24/09/2023

ಅಮಾಸೆಬೈಲು: ದಾರಿ ತಪ್ಪಿ ಕಾಡಿನೊಳಗೆ ಸೇರಿದ್ದ ಯುವಕನೋರ್ವ ಎಂಟು ದಿನಗಳ ಬಳಿಕ ಪತ್ತೆಯಾಗಿರುವ ಘಟನೆ ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ಎಂಬಲ್ಲಿ ನಡೆದಿದೆ.

ಪತ್ತೆಯಾದ ಯುವಕನನ್ನು ಸ್ಥಳೀಯ ನಿವಾಸಿ ಶೀನ ನಾಯ್ಕ ಎಂಬವರ ಮಗ ವಿವೇಕಾನಂದ(28) ಎಂದು ಗುರುತಿಸಲಾಗಿದೆ. ಸೆ.16ರಂದು ಮನೆಯಿಂದ ಹೊರಗೆ ಹೋದ ಇವರು, ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದರು.

ಮನೆಯವರು ಹಾಗೂ ನೂರಾರು ಮಂದಿ ಗ್ರಾಮಸ್ಥರು ಇವರಿಗಾಗಿ ಎಲ್ಲ ಕಡೆ ಪ್ರತಿದಿನ ಹುಡುಕಾಟ ನಡೆಸಿದರು. ಆದರೆ ಎಲ್ಲೂ ಕೂಡ ಪತ್ತೆಯಾಗಿರಲಿಲ್ಲ. ಮನೆ ಮಗನ ನಾಪತ್ತೆಯಿಂದ ಮನೆಯವರು ತೀರಾ ಆತಂಕಕ್ಕೆ ಒಳಗಾಗಿದ್ದರು.

ಮನೆಯಿಂದ ತನ್ನ ಸಾಕು ನಾಯಿ ಜೊತೆ ಹೊರಗಡೆ ಹೋಗಿದ್ದ ವಿವೇಕಾನಂದ ದಾರಿ ತಪ್ಪಿ ಕಾಡಿನೊಳಗೆ ಸೇರಿದ್ದರು. ವಾಪಾಸ್ಸು ಬರಲು ದಾರಿ ತಿಳಿಯದೆ ಮುಂದೆ ಸಾಗಿದರು. ರಾತ್ರಿ ವೇಳೆ ಮರದಡಿ ಮಲಗಿ, ಕಾಡಿನಲ್ಲಿ ಹರಿಯುವ ತೊರೆಯ ನೀರು ಸೇವಿಸಿ ದಿನ ದೂಡಿದ ವಿವೇಕಾನಂದಗೆ ಬೆಟ್ಟದ ತುದಿಯಲ್ಲಿರುವ ಈಶ್ವರ ದೇವಸ್ಥಾನ ಕಂಡಿತು. ಬಳಿಕ ಅವರು ಅಲ್ಲೇ ಸ್ವಲ್ವ ದಿನ ಉಳಿದುಕೊಂಡಿದ್ದರೆನ್ನಲಾಗಿದೆ.

vivekananda

ಅಲ್ಲಿಂದ ದೇವಸ್ಥಾನದ ಸಮೀಪ ಹರಿಯುವ ತೊರೆಯ ಆಧಾರದಲ್ಲಿ ಇಳಿದು ಬಂದ ಇವರು, ಶನಿವಾರ ಮಧ್ಯಾಹ್ನ 12.45ರ ಸುಮಾರಿಗೆ ತೊಂಬಟ್ಟು ಸಮೀಪದ ಕಬ್ಬಿನಾಲೆ ಎಂಬಲ್ಲಿರುವ ಜಗನ್ನಾಥ್ ಶೆಟ್ಟಿಗಾರ್ ಎಂಬವರ ಮನೆಯ ಬಳಿ ಬಂದು ಸೇರಿದರು. ಬಳಿಕ ಇವರನ್ನು ಗಮನಿಸಿದ ಸ್ಥಳೀಯರು, ಅವರ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಮನೆ ಮಗನನ್ನು ಕಂಡ ಮನೆಯವರು ಇದೀಗ ನಿಟ್ಟುಸಿರು ಬಿಟ್ಟರು.

ಎಂಟು ದಿನಗಳ ಕಾಲ ಅನ್ನ ಆಹಾರ ಇಲ್ಲದೆ ನಿತ್ರಾಣವಾಗಿದ್ದ ವಿವೇಕಾನಂದ ಅವರನ್ನು ಆರೈಕೆ ಮಾಡಲಾಯಿತು. ಎಂಟು ದಿನಗಳ ಬಳಿಕ ಪತ್ತೆಯಾದ ಯುವಕಕನ್ನು ನೋಡಲು ಜನಸ್ತೋಮವೇ ನೆರೆದಿತ್ತು. ಇವರ ಜೊತೆ ಹೋಗಿದ್ದ ಇವರ ಸಾಕು ನಾಯಿ ಕೂಡ ಎಂಟು ದಿನಗಳ ಕಾಲ ಇವರೊಂದಿಗೆ ಇದ್ದು ವಾಪಾಸ್ಸು ಬಂದಿರುವುದು ಬಹಳ ವಿಶೇಷವಾಗಿ ಎನಿಸಿದೆ

ಇತ್ತೀಚಿನ ಸುದ್ದಿ