ಸುಧಾಮೂರ್ತಿ ಹೆಸರಿನಲ್ಲಿ ಜಾಹೀರಾತು ನೀಡಿ ವಂಚನೆ: ಇಬ್ಬರು ಮಹಿಳೆಯರ ವಿರುದ್ಧ ಎಫ್ ಐಆರ್!
ಬೆಂಗಳೂರು: ಅಮೆರಿಕದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸುಧಾಮೂರ್ತಿ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಸುಳ್ಳು ಜಾಹೀರಾತು ನೀಡಿ ವಂಚಿಸಿದ ಬಗ್ಗೆ ಇಬ್ಬರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಧಾಮೂರ್ತಿ ಅವರ ಸಹಾಯಕರಾದ ಮಮತಾ ಸಂಜಯ್ ಅವರು ಈ ಬಗ್ಗೆ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಲಾವಣ್ಯ ಹಾಗೂ ಶ್ರುತಿ ಎಂಬವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಎಪ್ರಿಲ್ 5ರಂದು ಕನ್ನಡ ಕೂಟ ಆಫ್ ನಾರ್ತ್ ಕ್ಯಾಲಿಫೋರ್ನಿಯಾದ ವಾರ್ಷಿಕೋತ್ಸವದ ಆಹ್ವಾನ ಪತ್ರಿಕೆ ಇಮೇಲ್ ನಲ್ಲಿ ಸುಧಾಮೂರ್ತಿ ಅವರಿಗೆ ಬಂದಿತ್ತು. ಆದರೆ, ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ಸುಧಾಮೂರ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರ ಫೋಟೋ ಹಾಗೂ ಹೆಸರು ಬಳಸಿ ಜಾಹೀರಾತು ನೀಡಲಾಗಿತ್ತು ಎಂದು ದೂರಲಾಗಿದೆ.
ತಾನು ಸುಧಾಮೂರ್ತಿಯವರ ಸಹಾಯಕಿ ಎಂದು ಲಾವಣ್ಯ ಪರಿಚಯಿಸಿಕೊಂಡಿದ್ದು, ಸುಧಾಮೂರ್ತಿ ಅವರನ್ನು ಮುಖ್ಯ ಅತಿಥಿ ಎಂದು ಜಾಹೀರಾತಿನಲ್ಲಿ ನಮೂದಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ತಲಾ 40 ಡಾಲರ್ ನಂತೆ ಟಿಕೆಟ್ ದರವನ್ನು ವಿಧಿಸಲಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.