ಭಾರತ-ಆಸೀಸ್ 3 ನೇ ಏಕದಿನ ಪಂದ್ಯ: ಮ್ಯಾಕ್ಸ್‌ವೆಲ್‌ ಮಿಂಚಿನ ಬೌಲಿಂಗ್‌ ದಾಳಿಯಿಂದ ಆಸ್ಟ್ರೇಲಿಯಾಕ್ಕೆ 66 ರನ್ ಗಳ ಜಯ - Mahanayaka
12:12 AM Friday 20 - September 2024

ಭಾರತ-ಆಸೀಸ್ 3 ನೇ ಏಕದಿನ ಪಂದ್ಯ: ಮ್ಯಾಕ್ಸ್‌ವೆಲ್‌ ಮಿಂಚಿನ ಬೌಲಿಂಗ್‌ ದಾಳಿಯಿಂದ ಆಸ್ಟ್ರೇಲಿಯಾಕ್ಕೆ 66 ರನ್ ಗಳ ಜಯ

27/09/2023

ಭಾರತ-ಆಸೀಸ್ ನಡುವಿನ 3 ನೇ ಏಕದಿನ ಪಂದ್ಯದಲ್ಲಿ
ಆಸ್ಟ್ರೇಲಿಯಾ 66 ರನ್ ಗಳ ಜಯ ಗಳಿಸಿದೆ. ಗ್ಲೇನ್‌ ಮ್ಯಾಕ್ಸ್‌ವೆಲ್‌ ಮಿಂಚಿನ ಬೌಲಿಂಗ್‌ ದಾಳಿಯಿಂದ ಆಸ್ಟ್ರೇಲಿಯಾ ತಂಡವು ಅಂತಿಮ ಪಂದ್ಯದಲ್ಲಿ ಭಾರತದ ವಿರುದ್ಧ 66 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆದ್ರೆ ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ 2-1 ಅಂತರದಲ್ಲಿ ಸರಣಿ ಗೆದ್ದು ಬೀಗಿದೆ.

ರಾಜ್ ಕೋಟ್ ನ‌ ಸೌರಾಷ್ಟ್ರ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡು 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 352 ರನ್‌ ಗಳಿಸಿತ್ತು. 353 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 49.4 ಓವರ್‌ಗಳಲ್ಲಿ 286 ರನ್‌ ಗಳಿಗೆ ಆಲೌಟ್‌ ಆಯಿತು.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ವಾಷಿಂಗ್ಟನ್‌ ಸುಂದರ್‌ ಜೋಡಿ 10.5 ಓವರ್‌ಗಳಲ್ಲಿ 74 ರನ್‌ ಜೊತೆಯಾಟ ನೀಡಿತ್ತು. ಆರಂಭದಿಂದಲೇ ಆಸೀಸ್‌ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದ ನಾಯಕ ರೋಹಿತ್‌ ಶರ್ಮಾ 31 ಎಸೆತಗಳಲ್ಲಿ 5 ಸಿಕ್ಸರ್‌, 3 ಬೌಂಡರಿಯೊಂದಿಗೆ ಅರ್ಧಶತಕ ಸಿಡಿಸಿದರು. ಇದೇ ವೇಳೆ ಮ್ಯಾಕ್ಸ್‌ವೆಲ್‌ ಬೌಲಿಂಗ್‌ನಲ್ಲಿ ಸಿಕ್ಸ್‌ ಸಿಡಿಸಲು ಯತ್ನಿಸಿದ ಸುಂದರ್‌ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದರು.


Provided by

57 ಎಸೆತಗಳಲ್ಲಿ 81 ರನ್‌ (6 ಸಿಕ್ಸರ್‌, 5 ಬೌಂಡರಿ) ಗಳಿಸಿ ಆಡುತ್ತಿದ್ದ ರೋಹಿತ್‌ ಶರ್ಮಾ‌, ಮ್ಯಾಕ್ಸ್‌ವೆಲ್‌ ಬೌಲಿಂಗ್‌ನಲ್ಲೇ ಸುಲಭ ಕ್ಯಾಚ್‌ಗೆ ತುತ್ತಾದರು. ಈ ಬೆನ್ನಲ್ಲೇ ರೋಹಿತ್‌ ಶರ್ಮಾ ಜೊತೆಗೂಡಿ 2ನೇ ವಿಕೆಟ್‌ಗೆ 61 ಎಸೆತಗಳಲ್ಲಿ 71 ರನ್‌ ಜೊತೆಯಾಟ ನೀಡಿದ್ದ ವಿರಾಟ್‌ ಕೊಹ್ಲಿ ಸಹ 56 ರನ್‌ (61 ಎಸೆತ, 1 ಸಿಕ್ಸರ್‌, 5 ಬೌಂಡರಿ) ಗಳಿಸಿ ಮ್ಯಾಕ್ಸ್‌ವೆಲ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದ್ದ ಶ್ರೇಯಸ್‌ ಅಯ್ಯರ್‌ ಕೂಡ 48 ರನ್‌ (43 ಎಸೆತ, 2 ಸಿಕ್ಸರ್‌, 1 ಬೌಂಡರಿ) ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

ಬ್ಯಾಟಿಂಗ್‌ನಲ್ಲಿ ಕೇವಲ 5 ರನ್‌ ಗಳಿಸಿ ಕೈಕೊಟ್ಟಿದ್ದ ಮ್ಯಾಕ್ಸ್‌ವೆಲ್‌ ಟೀಂ ಇಂಡಿಯಾ ವಿರುದ್ಧ ಮಿಂಚಿನ ಬೌಲಿಂಗ್‌ ದಾಳಿ ನಡೆಸುವ ಮೂಲಕ ಆಸೀಸ್‌ ತಂಡದ ಗೆಲುವಿಗೆ ಕಾರಣವಾದರು. 10 ಓವರ್‌ಗಳಲ್ಲಿ 40 ರನ್‌ ಬಿಟ್ಟುಕೊಟ್ಟ ಮ್ಯಾಕ್ಸ್‌ವೆಲ್‌, ವಾಷಿಂಗ್ಟನ್‌ ಸುಂದರ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ ಪ್ರಮುಖರ ವಿಕೆಟ್‌ ಪಡೆಯುವ ಮೂಲಕ ಗೆಲುವು ತಂದುಕೊಟ್ಟರು.
ಉಳಿದಂತೆ ಟೀಂ ಇಂಡಿಯಾ ಪರ ಕೆ.ಎಲ್‌ ರಾಹುಲ್‌ 26 ರನ್‌, ರವೀಂದ್ರ ಜಡೇಜಾ 35 ರನ್‌, ಸೂರ್ಯಕುಮಾರ್‌ ಯಾದವ್‌ 8 ರನ್‌, ಕುಲ್ದೀಪ್‌ ಯಾದವ್‌ 2 ರನ್‌, ಜಸ್ಪ್ರೀತ್‌ ಬುಮ್ರಾ 5 ರನ್‌ ಹಾಗೂ ಮೊಹಮ್ಮದ್‌ ಸಿರಾಜ್‌ 1 ರನ್‌ ಗಳಿಸಿದ್ರೆ, ಪ್ರಸಿದ್ಧ್‌ ಕೃಷ್ಣ ರನ್‌ ಗಳಿಸದೇ ಅಜೇಯರಾಗುಳಿದರು. ಆಸೀಸ್‌ ಪರ ಜಾಶ್‌ ಹ್ಯಾಜಲ್‌ವುಡ್‌ 2 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮ್ಮಿನ್ಸ್‌, ಕ್ಯಾಮರೂನ್‌ ಗ್ರೀನ್‌, ತನ್ವೀರ್‌ ಸಂಘ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಅಂತಿಮವಾಗಿ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 352 ರನ್‌ ಗಳಿಸಿತು. ಆಸೀಸ್‌ ಪರ ಮಾರ್ನಸ್‌ ಲಾಬುಶೇನ್‌ 72 ರನ್‌ (9 ಬೌಂಡರಿ, 58 ಎಸೆತ), ಅಲೆಕ್ಸ್‌ ಕ್ಯಾರಿ 11 ರನ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ 5 ರನ್‌, ಕ್ಯಾಮರೂನ್‌ ಗ್ರೀನ್‌ 9 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಕೊನೆಯಲ್ಲಿ ಪ್ಯಾಟ್‌ ಕಮ್ಮಿನ್ಸ್‌ 19 ರನ್‌ ಹಾಘೂ ಮಿಚೆಲ್‌ ಸ್ಟಾರ್ಕ್‌ 1 ರನ್‌ ಗಳಿಸಿ ಅಜೇಯರಾಗುಳಿದರು. ಭಾರತ ಪರ ವೇಗಿ ಜಸ್ಪ್ರೀತ್‌ ಬುಮ್ರಾ 3 ವಿಕೆಟ್‌ ಕಿತ್ತರೆ, ಕುಲ್ದೀಪ್‌ ಯಾದವ್‌ 2 ವಿಕೆಟ್‌ ಹಾಗೂ ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಇತ್ತೀಚಿನ ಸುದ್ದಿ