ಯಡವಟ್ಟು ಮಾಡಿದ್ರು ವೈದ್ಯರು: ಡಾಕ್ಟರ್ ತಪ್ಪಿಗೆ 17 ವರ್ಷದ ಬಾಲಕಿ ಬಲಿ

ಖಾಸಗಿ ಆಸ್ಪತ್ರೆಯ ವೈದ್ಯರು 17 ವರ್ಷದ ಬಾಲಕಿಗೆ ತಪ್ಪಾದ ಇಂಜೆಕ್ಷನ್ ನೀಡಿದ ಪರಿಣಾಮ ತೀವ್ರ ಅಸ್ವಸ್ಥಗೊಂಡ ಬಾಲಕಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಡೆದಿದೆ.
ಬಾಲಕಿ ಮೃತಪಟ್ಟಿದ್ದರಿಂದ ಹೆದರಿದ ಆಸ್ಪತ್ರೆ ಸಿಬ್ಬಂದಿ ಆಕೆಯ ಮೃತದೇಹವನ್ನು ಆಸ್ಪತ್ರೆ ಹೊರಗೆ ನಿಲ್ಲಿಸಿದ್ದ ಬೈಕ್‌ನಲ್ಲಿ ಇರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬೈಕ್ ಮೇಲೆ ಬಾಲಕಿಯ ಮೃತದೇಹವನ್ನು ಇರಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಾಲಕಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಮನೆ ಮಂದಿ ಕರ್ಹಾಲ್ ರಸ್ತೆಯಲ್ಲಿರುವ ರಾಧಾ ಸ್ವಾಮಿ ಆಸ್ಪತ್ರೆಗೆ ಸೇರಿಸಿದ್ದರು. ಆಕೆ ಸಂಪೂರ್ಣವಾಗಿ ಚೆನ್ನಾಗಿದ್ದಾರೆ ಎಂದು ಹೇಳಿದ ವೈದ್ಯರು, ಅದಾದ ಬಳಿಕ ಚುಚ್ಚುಮದ್ದನ್ನು ನೀಡಿದ್ದರು. ಅದರ ನಂತರ ಆಕೆಯ ಸ್ಥಿತಿ ಹದಗೆಟ್ಟಿತು ಎಂದು ಬಾಲಕಿಯ ಚಿಕ್ಕಮ್ಮ ಆರೋಪಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ನೋಡಲ್ ಅಧಿಕಾರಿಯನ್ನು ಕಳುಹಿಸಿದ್ದಾರೆ. ಆಸ್ಪತ್ರೆ ತಲುಪಿದಾಗ ಅಲ್ಲಿ ವೈದ್ಯರು ಹಾಗೂ ಆಡಳಿತ ಸಿಬ್ಬಂದಿ ಇಲ್ಲದಿರುವುದನ್ನು ಕಂಡು ಆಸ್ಪತ್ರೆಗೆ ಸೀಲ್ ಮಾಡಲು ಆದೇಶ ನೀಡಿದ್ದಾರೆ.