ಎರಡು ದಿನಗಳಲ್ಲಿ 31 ರೋಗಿಗಳ ಸಾವು ಪ್ರಕರಣ: ಸರ್ಕಾರಿ ಆಸ್ಪತ್ರೆಯ ಡೀನ್ ರಿಂದಲೇ ಶೌಚಾಲಯ ಶುಚಿಗೊಳಿಸಿದ ಸಂಸದ..!

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಿನಗಳಲ್ಲಿ 31 ರೋಗಿಗಳು ಸಾವನ್ನಪ್ಪಿದ ವಿಚಾರ ಬಹಳ ಚರ್ಚೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಈ ಆಸ್ಪತ್ರೆಗೆ ಬಿಜೆಪಿ ಸಂಸದ ಹೇಮಂತ್ ಪಾಟೀಲ್ ಭೇಟಿ ನೀಡಿ ಆಸ್ಪತ್ರೆಯ ಡೀನ್ ರಿಂದಲೇ ಶೌಚಾಲಯವನ್ನು ಶುಚಿಗೊಳಿಸಿದ್ದಾರೆ.
ಸಂಸದ ಪಾಟೀಲ್ ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ ಇತರ ಸದಸ್ಯರು ಸುತ್ತಲೂ ನಿಂತಿದ್ದ ಸಂದರ್ಭದಲ್ಲಿ ಡೀನ್ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಹೇಳಿದ್ದಾರೆ.
ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2 ರ ನಡುವೆ ಸಂಭವಿಸಿದ ಸಾವುಗಳಿಗೆ ಆಸ್ಪತ್ರೆಯ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡಿ, ಅವರೆಲ್ಲರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಸಂಸದ ಪಾಟೀಲ್ ಒತ್ತಾಯಿಸಿದ್ದಾರೆ.
ಇದೇ ವೇಳೆ ಕೆಲವು ರೋಗಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಮಾತನಾಡಿದ ಪಾಟೀಲ್, ತಿಂಗಳಿಂದ ಬಳಕೆಯಾಗದೆ ಇರುವ ಸ್ನಾನಗೃಹಗಳು ಕೊಳಕಿನಿಂದ ತುಂಬಿದೆ. ಮಕ್ಕಳ ಬ್ಲಾಕ್‌ನಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ, ಮಹಿಳೆಯರ ಬ್ಲಾಕ್‌ನಲ್ಲಿ ಮದ್ಯದ ಬಾಟಲಿಗಳು ತುಂಬಿವೆ ಎಂದರು.
ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಂದಿಗಳು ಸೇರಿದಂತೆ ಹಲವು ಪ್ರಾಣಿಗಳು ಓಡಾಡುತ್ತಿವೆ. ಸುತ್ತಲೂ ಸಾಕಷ್ಟು ಕೊಳಕು ಬಿದ್ದಿದ್ದು, ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಆಸ್ಪತ್ರೆಯ ಡೀನ್ ಮತ್ತು ವಿಭಾಗದ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇನೆ ಎಂದು ಗರಂ ಆದ್ರು.