ಆರೋಪಿಗಳ ಐಷಾರಾಮಿ ಕಾರು ಮಾರಾಟ ಪ್ರಕರಣ; ಉನ್ನತ ಮಟ್ಟದ ತನಿಖೆಗೆ ಆಗ್ರಹ
ಮಂಗಳೂರು: ವಂಚನೆ ಪ್ರಕರಣದ ಆರೋಪಿಗಳ ಐಷಾರಾಮಿ ಕಾರು ಮಾರಾಟ ಮಾಡಿದ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ಇದನ್ನು ಹಿರಿಯ ಅಧಿಕಾರಿಗಳ ಮುಖೇನ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು CPIM ನಾಯಕರೂ, ಸಾಮಾಜಿಕ ಹೋರಾಟಗಾರರಾದ ಸುನೀಲ್ ಕುಮಾರ್ ಬಜಾಲ್ ಆಗ್ರಹಿಸಿದ್ದಾರೆ.
ಕಾರು ಮಾರಾಟ ಪ್ರಕರಣದಲ್ಲಿ ಒಂದಿಬ್ಬರು ಅಧಿಕಾರಿಗಳ ಹಣದ ದಾಹಕ್ಕೆ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ. ಆರೋಪಿಗಳ ಕಾರು ಮಾರಾಟ ಪ್ರಕರಣ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆ, ಇತ್ತೀಚಿನ ವರ್ಷಗಳಲ್ಲಿ ಅನೇಕ ಪ್ರಕರಣದಲ್ಲಿ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಮತ್ತು ಸುಲಿಗೆ ಮಾಡಿರುವ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಜನರು ವಿಶ್ವಾಸವಿರಿಸಿದ ರಕ್ಷಕರಿಂದಲೇ ಇಂತಹ ಘಟನೆ ನಡೆದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಿದ್ದಾರೆ.
ವಂಚಕರಿಗೆ ನೆರವು ನೀಡುವುದರ ಹೇಯ ಕೃತ್ಯಕ್ಕೆ ಪ್ರಚೋದಿಸುವ ಇಂತಹ ಘಟನೆ ಯಾವತ್ತೂ ನಡೆಯಬಾರದು. ಹಿರಿಯ ಅಧಿಕಾರಿಗಳು, ಮಂಗಳೂರು ನಗರ ಪೊಲೀಸ್ ಕಮಿಷನರ್ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಿಮ್ಮ ವಾಟ್ಸಾಪ್ ಗ್ರೂಪ್ ಗೆ ಈ ನಂಬರ್ ಸೇರಿಸಿ: 6363101317