ಪಿಡಿಓ ಮೇಲೆ ರೌದ್ರಾವತಾರ: ವಿಡಿಯೋ ವೈರಲ್ ಆದ ಬೆನ್ನಲ್ಲೇ ಗುಟ್ಟಾಗಿ ಕ್ಷಮೆಯಾಚಿಸಿದ ಸರ್ಕಲ್ ಇನ್ಸ್ ಪೆಕ್ಟರ್! - Mahanayaka
11:11 AM Saturday 21 - September 2024

ಪಿಡಿಓ ಮೇಲೆ ರೌದ್ರಾವತಾರ: ವಿಡಿಯೋ ವೈರಲ್ ಆದ ಬೆನ್ನಲ್ಲೇ ಗುಟ್ಟಾಗಿ ಕ್ಷಮೆಯಾಚಿಸಿದ ಸರ್ಕಲ್ ಇನ್ಸ್ ಪೆಕ್ಟರ್!

pucche mogaru
09/10/2023

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯ ಪುಚ್ಚಮೊಗರಿನಲ್ಲಿ ಹಸಿರು ಧ್ವಜ ತೆರವುಗೊಳಿಸಿದ ವೇಳೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಅವರು ಪಿಡಿಓ ಅವರನ್ನ ನಿಂದಿಸಿರುವ ವಿಡಿಯೋ ವೈರಲ್ ಆಗಿತ್ತು.  ಎಲ್ಲರೂ ಪಿಡಿಓ ಏನೋ ತಪ್ಪು ಮಾಡಿದ್ದಾರೆ ಎಂಬಂತೆ ಈ ವಿಡಿಯೋವನ್ನ ನೋಡುತ್ತಿದ್ದಾರೆ. ಫಾರ್ವರ್ಡ್ ಮಾಡುತ್ತಿದ್ದಾರೆ. ಅದರ ಹಿಂದಿನ ಸತ್ಯಾಂಶ ಇಲ್ಲಿದೆ.

ಇರುವೈಲು ಗ್ರಾಮ ಪಂಚಾಯತ್ ನ ಪಿಡಿಒ ಶೇಖರ್ ಅವರು, ಹೊಸಬೆಟ್ಟು ಪಂಚಾಯತ್ ನ ಪಿಡಿಒ 10 ದಿನಗಳ ಕಾಲ ರಜೆಯಲ್ಲಿದ್ದ ಕಾರಣ ಹೊಸಬೆಟ್ಟು ಪಂಚಾಯತ್ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಅವರು ಇಲ್ಲಿಗೆ ಒಂದು 2 ದಿನಗಳಾಗಿತ್ತಷ್ಟೇ. ಅಂದು ಇಲ್ಲಿನ ಮನೆಗಾರ್ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಬ್ಯಾಕ್ ಟು ಬ್ಯಾಕ್ ಕರೆ ಮಾಡಿ, ಪುಚ್ಚಮೊಗರಿನ ಮಾವಿನಕಟ್ಟೆ ಬಳಿಗೆ ಬರುವಂತೆ ಆತುರಾತುರವಾಗಿ ಕರೆದಿದ್ದಾರೆ.

2 ದಿನಗಳ ಹಿಂದೆಯಷ್ಟೇ ಬಂದಿದ್ದ ಪಿಡಿಓಗೆ ಈ ಸ್ಥಳದಲ್ಲಿರುವ ವಿವಾದಗಳು ತಿಳಿದಿರಲಿಲ್ಲ.  ಮಾವಿನಕಟ್ಟೆ ಎಂದು ಕರೆಯಲ್ಪಡುತ್ತಿದ್ದ ಈ ಕಟ್ಟೆಯನ್ನ ಇತ್ತೀಚೆಗೆ ಗಣಪತಿ ಕಟ್ಟೆ ಅಂತ ಹೆಸರು ಬದಲಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪ ಹಾಗೂ ಅದರ ಹಿಂದೆ ಒಂದಷ್ಟು ರಾಜಕೀಯಗಳು ಚರ್ಚೆಗಳು ನಡೆಯುತ್ತಿದ್ದವು. ಅದರ ಭಾಗವಾಗಿಯೇ ಹಸಿರು ಕೇಸರಿ ಎಂಬ ವಿವಾದವೂ ಕೇಳಿ ಬಂದಿತ್ತು ಎನ್ನಲಾಗಿದೆ. ಇದ್ಯಾವುದೂ ಗೊತ್ತಿಲ್ಲದ ಪಿಡಿಓ ಶೇಖರ್ ಸ್ಥಳಕ್ಕೆ ತೆರಳಿದಾಗ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್, ಹಸಿರು ಧ್ವಜವನ್ನ ತೆರವುಗೊಳಿಸುವಂತೆ ಪಿಡಿಓ ಶೇಖರ್ ಅವರಿಗೆ ತಾಕೀತು ಮಾಡಿದ್ದಾರೆ. ಆದ್ರೆ, “ಈ ಧ್ವಜ ಹಾಕಲಾಗಿರುವ ಬಗ್ಗೆ ಇದನ್ನ ತೆರವುಗೊಳಿಸಲು ನಮಗೆ ಯಾವುದೇ ದೂರುಗಳು ಬಂದಿಲ್ಲ, ಅಲ್ಲದೇ ಇದು ಪಿಡ್ಲ್ಯುಡಿ ರಸ್ತೆ ಮಾರ್ಜಿನ್ ನಲ್ಲಿದೆ, ನೀವು ಪಿಡಬ್ಲ್ಯುಡಿಯವರನ್ನು ಕರೆಯಿರಿ ಎಂದು ಶೇಖರ್ ಅವರು ಕಾನೂನಿನ ವ್ಯಾಪ್ತಿಯ ಬಗ್ಗೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಅವರಿಗೆ ತಿಳಿಸಿದ್ದಾರೆ.


Provided by

ಪಿಡಿಓ ಶೇಖರ್ ಅವರು ಇಷ್ಟು ಹೇಳುತ್ತಿದ್ದಂತೆಯೇ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ರೌದ್ರಾವತಾರ ತಾಳಿದ್ದಾರೆ.  ಪರ್ಮಿಷನ್ ತೆಗೆದುಕೊಂಡಿದ್ದಾರೆನ್ನಪ್ಪ ಇದು? ಅಂತ ಪ್ರಶ್ನೆ ಮಾಡಿದ್ದಾರೆ. ಪರ್ಮಿಷನ್ ತಗೊಂಡಿಲ್ಲ ಅಂತ ಪಿಡಿಓ ಉತ್ತರಿಸಿದರು. ಈ ವೇಳೆ ನಿನ್ಗೆ ನಿನ್ನ ಕೆಲಸ ಏನು ಅಂತ ಗೊತ್ತಿಲ್ಲ, ಯಾವೊನು ಇವನು, ಇವನನ್ನೇ ಆರೋಪಿ ಮಾಡಬೇಕು. ಅವನ ವಿಡಿಯೋ ಮಾಡಿ, ಪಿಡಿಓದ್ದು. ಇವನಿಗೂ ಅದಕ್ಕೂ ಸಂಬಂಧನೇ ಇಲ್ಲ ಅಂತಾನೆ, ಮತ್ತೆ ಯಾಕೆ ಪಿಡಿಓ ಆಗಿದ್ದು? ಕಂಪ್ಲೈಂಟ್ ಕೊಡಕ್ಕಾಗಲ್ವಾ? ಪರ್ಮಿಷನ್ ತಗೊಂಡಿದ್ದಾರಾ? ಎಂಬಂತೆ ಏಕವಚನದಲ್ಲಿ ಬೈದು ಪಿಡಿಓ ಮೇಲೆ ರೌದ್ರಾವತಾರ ತೋರಿಸಿದ್ದಾರೆ.

ಪಂಚಾಯತ್ ಗೆ ಈ ಕಟ್ಟೆಯ ಬಗ್ಗೆ ಯಾವುದೇ ದೂರು ಬಂದಿಲ್ಲ,  ಪೊಲೀಸರಿಗೆ ಏನು ದೂರು ಬಂದಿದೆ ಎನ್ನುವ ಮಾಹಿತಿ ಕೂಡ ಪಿಡಿಓ ಶೇಖರ್ ಅವರಿಗೆ ನೀಡಿಲ್ಲ, ಕಾನೂನು ವ್ಯಾಪ್ತಿಯ ಬಗ್ಗೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಗೆ ಮಾಹಿತಿ ನೀಡಿದರೂ, ಪಿಡಿಓಗೆ ಮಾತನಾಡಲೂ ಅವಕಾಶ ಕೊಡದೇ ನಾನು ಹೇಳಿದ್ದೇ ಕಾನೂನು ಎಂಬಂತೆ ಸರ್ಕಲ್ ಇನ್ಸ್ ಪೆಕ್ಟರ್ ನಡೆದುಕೊಂಡಿದ್ದಾರೆ. ಪೊಲೀಸ್ ಇಲಾಖೆ, ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕು. ಆದ್ರೆ, ಸ್ಥಳಕ್ಕೆ ಬಂದ ಪಿಡಿಓ ಬಳಿಯಲ್ಲಿಯೇ ತೆರವು ಮಾಡು ಎಂದು ಒಬ್ಬ ಕೆಲಸಗಾರನಿಗೆ ಧಮ್ಕಿ ಹಾಕುವಂತೆ ಹಾಕಿರುವುದಲ್ಲದೇ, ಇವನ್ನೇ ಆರೋಪಿ ಮಾಡಬೇಕು ಎಂದು ಸ್ಥಳೀಯರನ್ನ ಪಿಡಿಓ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಎಷ್ಟು ಸರಿ? ಪಿಡಿಓ ಅವರನ್ನು ಬೈಯ್ಯುವ ಅಧಿಕಾರ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಗೆ ಕೊಟ್ಟವರು ಯಾರು?  ಎನ್ನುವ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರ ನೀಡಬೇಕಿದೆ.

ಈ ಘಟನೆಯ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಅವರು ಪೊಲೀಸ್ ಅಧಿಕಾರಿಯೊಬ್ಬರಿಂದ ಪಿಡಿಓ ಶೇಖರ್ ಅವರಿಗೆ ಕರೆ ಮಾಡಿಸಿ ಮಾತನಾಡಿದ್ದಾರೆ. ಕರೆಯಲ್ಲಿ ಸ್ವತಃ ಸಂದೇಶದ ಅವರೇ ಮಾತನಾಡಿದ್ದಾರೆ. ಶೇಖರ್ ಅವರೇ… ಸಾರಿ ವೆರಿ ಸಾರಿ… ಭಾರೀ ಬೇಜಾರಾಗಿದೆ ಎಂದಿದ್ದಾರೆ. ಅಲ್ಲದೇ ವಿಡಿಯೋ ಮಾಡಿದವನು ಯಾರು? ಎಂದು ಪ್ರಶ್ನಿಸಿದ್ದಾರೆ. ಪದೇ ಪದೇ ವಿಡಿಯೋ ಮಾಡಿದವನ ಬಗ್ಗೆಯೇ ಕೇಳಿದ್ದಾರೆ. ವಿಡಿಯೋ ಮಾಡಿದ ಸಿಬ್ಬಂದಿಗೆ ಕಿರುಕುಳ ನೀಡಲು ಈ ರೀತಿಯಾಗಿ ಕೇಳುತ್ತಿದ್ದಾರೆಯೇ ಎನ್ನುವ ಅನುಮಾನ ಬರುವಂತೆ ಅವರು ವಿಚಾರಿಸಿದ್ದಾರೆ.

ಕಾನೂನಿನಡಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ಪಿಡಿಓಗೆ ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪಿಡಿಓ ಅವರನ್ನು ಇಷ್ಟು ನಿಕೃಷ್ಟವಾಗಿ ಕಾಣಲು ಕಾರಣವೇನು? ಒಬ್ಬ ದಲಿತ ಪಿಡಿಓ ಎನ್ನುವುದೇ ಇದಕ್ಕೆ ಕಾರಣವೇ? ಮೇಲ್ಜಾತಿಯ ಪಿಡಿಓ ಆಗಿದ್ದರೆ, ಇದೇ ರೀತಿಯಲ್ಲಿ ಅವಮಾನ ಮಾಡುತ್ತಿದ್ದರೆ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಜೊತೆಗೆ ಪಿಡಿಓ ಒಬ್ಬರಿಗೆ ಈ ರೀತಿ ಅವಮಾನವಾಗಿದ್ದರೂ, ಪಿಡಿಓ ಅವರ ಮೇಲಾಧಿಕಾರಿಗಳು ಏನೂ ಮಾತನಾಡದೇ, ತಮ್ಮ ಇಲಾಖೆಯ ಅಧಿಕಾರಿಗೆ ಕಿರುಕುಳ ನೀಡಿದವರ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗದೇ ಮೌನಕ್ಕೆ ಶರಣಾಗಿರೋದು ಅನುಮಾನಗಳಿಗೆ ಕಾರಣವಾಗಿದೆ.

ಘಟನೆಯ ಬಳಿಕ ಪಿಡಿಓ ಶೇಖರ್ ಅವರಿಗೆ ಪೊಲೀಸ್ ಅಧಿಕಾರಿಯೊಬ್ಬರ ಅವರ ಮೂಲಕ ಕರೆ ಮಾಡಿಸಿ, ಸ್ವತಃ ತ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿಡಿಓ ಅವರ ಬಳಿಯಲ್ಲಿ ಗುಟ್ಟಾಗಿ ಕ್ಷಮೆಯಾಚಿಸಿರುವ ಆಡಿಯೋ ಮಹಾನಾಯಕ ಡಾಟ್ ಇನ್ ಗೆ ಲಭ್ಯವಾಗಿದೆ.

ವಿಡಿಯೋ ನೋಡಿ:

ಇತ್ತೀಚಿನ ಸುದ್ದಿ