ದೇವೇಗೌಡರೇ ಇದು ಉಚ್ಛಾಟನೆಯೇ “ಹುಚ್ಚಾಟನೆ”ಯೇ?: ಸಿಎಂ ಇಬ್ರಾಹಿಂ ಉಚ್ಛಾಟನೆ ವಿರುದ್ಧ ಯುವ ಮುಖಂಡ ಸಚಿನ್ ಸರಗೂರು ಕಿಡಿ - Mahanayaka
7:16 AM Saturday 21 - September 2024

ದೇವೇಗೌಡರೇ ಇದು ಉಚ್ಛಾಟನೆಯೇ “ಹುಚ್ಚಾಟನೆ”ಯೇ?: ಸಿಎಂ ಇಬ್ರಾಹಿಂ ಉಚ್ಛಾಟನೆ ವಿರುದ್ಧ ಯುವ ಮುಖಂಡ ಸಚಿನ್ ಸರಗೂರು ಕಿಡಿ

sachin saraguru
19/10/2023

ಹಾಸನ: ಹಿಂದುಳಿದ ವರ್ಗಗಳ, ದಲಿತರ, ಮುಸಲ್ಮಾನರ ಬೆಂಬಲ ಕಳೆದುಕೊಂಡಿದ್ದ ಜೆಡಿಎಸ್ ಪಕ್ಷಕ್ಕೆ ಸಿಎಂ ಇಬ್ರಾಹಿಂ ಅವರು ರಾಜ್ಯಾಧ್ಯಕ್ಷರಾಗಿ ಸಾರಥ್ಯವಹಿಸಿದ ಬಳಿಕ ಹೊಸ ಶಕ್ತಿಯೊಂದು ರೂಪುಗೊಂಡು ಪಕ್ಷ ಬಲಿಷ್ಠವಾಗುವತ್ತ ಸಾಗುತ್ತಿತ್ತು. ಆದ್ರೆ, ಇದೀಗ ಯಾವುದೇ ಸೂಚನೆಯನ್ನೂ ನೀಡದೇ ಇಬ್ರಾಹಿಂ ಅವರನ್ನು ಉಚ್ಛಾಟಿಸಿ, ರಾಜ್ಯಾಧ್ಯಕ್ಷ ಸ್ಥಾನವನ್ನು  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿರುವ ಬೆನ್ನಲ್ಲೇ ಜೆಡಿಎಸ್ ನೊಳಗೆ ಆಕ್ರೋಶ ಬುಗಿಲೆದ್ದಿದೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಾಸನದ ಯುವ ಮುಖಂಡ ಯುವ ಮುಖಂಡ ಸಚಿನ್ ಸರಗೂರು, ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಬಿಜೆಪಿ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಾಗಿದೆ. ಇದನ್ನು ಪ್ರಶ್ನಿಸಿದ ಬೆನ್ನಲ್ಲೇ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರಿಗೆ ಜೆಡಿಎಸ್ ನಲ್ಲಿ ಯಾವುದೇ ಅಧಿಕಾರ ಇಲ್ಲವೇ? ಕುಮಾರಸ್ವಾಮಿ ಅವರು ಹೇಳಿದ್ದನ್ನು ಮಾಡಿಕೊಂಡು ಇರುವುದೇ ಜೆಡಿಎಸ್ ರಾಜ್ಯಾಧ್ಯಕ್ಷರ ಅಧಿಕಾರವೇ? ಹಾಗಿದ್ದರೆ, ಜೆಡಿಎಸ್ ಗೆ ಕುಮಾರಸ್ವಾಮಿ ಅವರನ್ನೇ ಶಾಶ್ವತ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಬಹುದಿತ್ತಲ್ಲವೇ? ಇಷ್ಟೆಲ್ಲ ನಾಟಕಗಳು ಅಗತ್ಯವೇ? ಎಂದು ಪ್ರಶ್ನಿಸಿದ್ದಾರೆ.

ಜೆಡಿಎಸ್ ಪಕ್ಷವು ದೇವೇಗೌಡರ ಕುಟುಂಬದ ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಇಂತಹವರಿಗೆ ಮಾತ್ರವೇ ಅಧಿಕಾರ ತಂದುಕೊಡಲು ಇರುವ ಪಕ್ಷವೇ? ದೇವೇಗೌಡರು ಸಿಎಂ ಇಬ್ರಾಹಿಂ ಅವರಿಂದ ರಾಜ್ಯಾಧ್ಯಕ್ಷ ಸ್ಥಾನ ಕಿತ್ತು, ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ. ಇದು ಕುಟುಂಬ ರಾಜಕಾರಣದ ಭಾಗವೇ? ಜೆಡಿಎಸ್ ಪಕ್ಷದಲ್ಲಿ ದೇವೇಗೌಡರ ಕುಟುಂಬಸ್ಥರನ್ನು ಹೊರತುಪಡಿಸಿ, ಇರುವ ಇತರ ನಾಯಕರು, ಬೇಕಾದಾಗ ಸ್ಥಾನ ನೀಡಿ ಬೇಡವಾದಾಗ ಕಿತ್ತೆಸೆಯಲು ಇರುವ ಡಮ್ಮಿ ನಾಯಕರುಗಳೇ? ಎಂದು  ಸಚಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Provided by

ಸಿಎಂ ಇಬ್ರಾಹಿಂ ಅವರನ್ನು ಉಚ್ಛಾಟನೆ ಮಾಡಿರೋದು ದೇವೇಗೌಡರ ಕುಟುಂಬಸ್ಥರ ಏಕಮುಖಿ ತೀರ್ಮಾನವಾಗಿದೆ. ಪಕ್ಷದ ಯಾವುದೇ ಪದಾಧಿಕಾರಿಗಳ ಅಭಿಪ್ರಾಯಗಳನ್ನೂ ಪಡೆಯದೇ ಈ ತೀರ್ಮಾನ ಕೈಗೊಂಡಿರುವುದು ಜೆಡಿಎಸ್ ನಲ್ಲಿರುವ ಯುವ ನಾಯಕರನ್ನು ಕಂಗೆಡಿಸಿದೆ. ಯಾವ ಭರವಸೆಯೊಂದಿಗೆ ಯುವ ನಾಯಕರು ದೇವೇಗೌಡರ ನೇತೃತ್ವದ ಜೆಡಿಎಸ್ ನಲ್ಲಿ ಮುಂದುವರಿಯಬೇಕು ಎನ್ನುವ ಪ್ರಶ್ನೆಗಳು ನಮ್ಮ ಮುಂದಿದೆ.  ದೇವೇಗೌಡರ ಕುಟುಂಬಸ್ಥರಿಗೆ ಮಾತ್ರವೇ ಜೆಡಿಎಸ್ ನಲ್ಲಿ ಶಾಶ್ವತ ನೆಲೆ ಇರಲಿದೆ. ಇತರ ನಾಯಕರು ಕೇವಲ ಪಕ್ಷ ಕಟ್ಟಲು ಹೆಗಲು ನೀಡಬೇಕು. ಕನಿಷ್ಠ ಮಾತನಾಡುವ ಸ್ವಾತಂತ್ರ್ಯ ಕೂಡ ಜೆಡಿಎಸ್ ಪಕ್ಷದಲ್ಲಿಲ್ಲವೇ? ಎಂದು ಸಚಿನ್ ಸರಗೂರು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಅವರು ತಮ್ಮ ಹಠ ಸ್ವಭಾವವನ್ನು ಬಿಡಬೇಕು. ನಿಮ್ಮ ಬಲಾತ್ಕಾರದ ಕ್ರಮಗಳು ಯುವ ನಾಯಕರ ಮನಸ್ಸುಗಳನ್ನು ಘಾಸಿಗೊಳಿಸುತ್ತಿದೆ. ರಾಜ್ಯದ ಜನರಿಗೆ ಕುಟುಂಬ ರಾಜಕಾರಣದ ಜೆಡಿಎಸ್ ಬೇಸತ್ತು ಹೋಗಿದೆ. ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಿ ಇಲ್ಲವಾದರೆ,  ಸಿಎಂ ಇಬ್ರಾಹಿಂ ಅವರ ಜೊತೆ ನಿಂತು ನಿಜವಾದ ಜಾತ್ಯತೀತ ಜನತಾದಳವನ್ನು ಸ್ಥಾಪನೆ ಮಾಡುವ ಮೂಲಕ ಯುವ ನಾಯಕರ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಸಚಿನ್ ಎಚ್ಚರಿಸಿದರು.

ಇತ್ತೀಚಿನ ಸುದ್ದಿ