‘ಹಾವು ಹಾವಾಗಿಯೇ ಉಳಿಯುತ್ತದೆ’: ಟರ್ಕಿ ಅಧ್ಯಕ್ಷರ ಗಾಝಾ ಹೇಳಿಕೆಗೆ ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ರಾಯಭಾರಿ ಪ್ರತಿಕ್ರಿಯೆ
ಇಸ್ರೇಲ್ ಹಮಾಸ್ ಸಂಘರ್ಷದ ಬಗ್ಗೆ ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ನೀಡಿದ ಹೇಳಿಕೆಯನ್ನು ಖಂಡಿಸಿದ ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡಾನ್, “ಹಾವು ಹಾವಾಗಿಯೇ ಉಳಿಯುತ್ತದೆ” ಎಂದು ಹೇಳಿದ್ದಾರೆ. ಎರ್ಡೊಗನ್ “ಯಹೂದಿ ವಿರೋಧಿಯಾಗಿ ಉಳಿದಿದ್ದಾರೆ” ಎಂದು ಅವರು ಆರೋಪಿಸಿದರು.
ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದ ನಂತರದ ಅತಿದೊಡ್ಡ ರ್ಯಾಲಿಗಳಲ್ಲಿ ಒಂದಾದ ಇಸ್ತಾಂಬುಲ್ ನಲ್ಲಿ ಫೆಲೆಸ್ತೀನ್ ಪರ ರ್ಯಾಲಿಯನ್ನುದ್ದೇಶಿಸಿ ಎರ್ಡೊಗನ್ ಮಾತನಾಡಿದ ನಂತರ ಎರ್ಡಾನ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ರ್ಯಾಲಿಯಲ್ಲಿ ಎರ್ಡೊಗನ್ ಅವರು ಇಸ್ರೇಲ್ ಅನ್ನು “ಯುದ್ಧ ಅಪರಾಧಿ” ಮತ್ತು “ಆಕ್ರಮಣಕಾರ” ಎಂದು ಕರೆದಿದ್ದರು. ಒಂದು ಗಂಟೆಯ ಭಾಷಣದಲ್ಲಿ ಎರ್ಡೊಗನ್ ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲ ಎಂದು ಪುನರುಚ್ಚರಿಸಿದರು. ಆದರೆ ಇಸ್ರೇಲ್ ಗೆ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳ “ಬೇಷರತ್ತಾದ ಬೆಂಬಲ” ವನ್ನು ಅವರು ಖಂಡಿಸಿದ್ದರು.
ಇಸ್ರೇಲ್ ಯುದ್ಧ ಅಪರಾಧಿ ಎಂದು ನಾವು ಇಡೀ ಜಗತ್ತಿಗೆ ಹೇಳುತ್ತೇವೆ. ಇದಕ್ಕಾಗಿ ನಾವು ಸಿದ್ಧತೆಗಳನ್ನು ಮಾಡುತ್ತಿದ್ದೇವೆ. ನಾವು ಇಸ್ರೇಲ್ ಅನ್ನು ಯುದ್ಧ ಅಪರಾಧಿ ಎಂದು ಘೋಷಿಸುತ್ತೇವೆ” ಎಂದು ಅವರು ಹೇಳಿಕೆ ನೀಡಿದ್ದರು. ಇಸ್ರೇಲ್ 22 ದಿನಗಳಿಂದ ಬಹಿರಂಗವಾಗಿ ಯುದ್ಧಾಪರಾಧಗಳನ್ನು ಮಾಡುತ್ತಿದೆ. ಆದರೆ ಪಾಶ್ಚಿಮಾತ್ಯ ನಾಯಕರು ಇಸ್ರೇಲ್ ಗೆ ಕದನ ವಿರಾಮಕ್ಕೆ ಕರೆ ನೀಡಲು ಸಹ ಸಾಧ್ಯವಿಲ್ಲ” ಎಂದು ಎರ್ಡೊಗನ್ ಇಸ್ತಾಂಬುಲ್ ನಲ್ಲಿ ಫೆಲೆಸ್ತೀನ್ ಧ್ವಜಗಳನ್ನು ಬೀಸಿದ ಜನಸಮೂಹವನ್ನುದ್ದೇಶಿಸಿ ಹೇಳಿಕೆ ನೀಡಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಇಸ್ರೇಲ್ ವಿದೇಶಾಂಗ ವ್ಯವಹಾರಗಳ ಸಚಿವ ಎಲಿ ಕೋಹೆನ್, “ಟರ್ಕಿಯಿಂದ ಬರುತ್ತಿರುವ ಗಂಭೀರ ಹೇಳಿಕೆಗಳನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್ ಮತ್ತು ಟರ್ಕಿ ನಡುವಿನ ಸಂಬಂಧಗಳ ಮರು ಮೌಲ್ಯಮಾಪನ ನಡೆಸುವ ಸಲುವಾಗಿ ರಾಜತಾಂತ್ರಿಕ ಪ್ರತಿನಿಧಿಗಳನ್ನು ಅಲ್ಲಿಗೆ ಮರಳಲು ನಾನು ಆದೇಶಿಸಿದ್ದೇನೆ’ ಎಂದಿದ್ದಾರೆ.