ಗಾಝಾದ ಮೇಲೆ ಇಸ್ರೇಲ್ ದಾಳಿ ಕಾನೂನಿಗೆ ವಿರುದ್ಧವಾಗಿದೆ: ರಷ್ಯಾ ಗಂಭೀರ ಆರೋಪ

ಗಾಝಾದ ಮೇಲೆ ಇಸ್ರೇಲ್‌ನ ಬಾಂಬ್ ದಾಳಿಯು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ರಷ್ಯಾ ಆರೋಪಿಸಿದೆ. ಅಲ್ಲದೇ ಈ ದಾಳಿಯು ದಶಕಗಳ ಕಾಲ ಉಳಿಯಬಹುದಾದ ದುರಂತವನ್ನು ಸೃಷ್ಟಿಸುವ ಅಪಾಯವಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ.
“ನಾವು ಭಯೋತ್ಪಾದನೆಯನ್ನು ಖಂಡಿಸುತ್ತೇವೆ. ಒತ್ತೆಯಾಳುಗಳು ಸೇರಿದಂತೆ ನಾಗರಿಕರು ಇರುವ ಪ್ರದೇಶಗಳಿಗೆ ವಿವೇಚನಾರಹಿತವಾಗಿ ದಾಳಿ ನಡೆಸುವುದು ಸೇರಿದಂತೆ ಅಂತರಾಷ್ಟ್ರೀಯ ಮಾನವೀಯ ಕಾನೂನಿನ ನಿಯಮಗಳನ್ನು ಉಲ್ಲಂಘಿಸುವ ಮೂಲಕ ನೀವು ಭಯೋತ್ಪಾದನೆಗೆ ಪ್ರತಿಕ್ರಿಯಿಸಬಹುದು ಎಂಬುವುದನ್ನು ನಾವು ಒಪ್ಪುವುದಿಲ್ಲ” ಎಂದು ಅವರು ಹೇಳಿದರು.
ಗಾಝಾದ ಹೆಚ್ಚಿನ ನಾಗರಿಕರನ್ನು ಕೊಲ್ಲದೆ, ಇಸ್ರೇಲ್ ವಾಗ್ದಾನ ಮಾಡಿದಂತೆ ಹಮಾಸ್ ಅನ್ನು ನಾಶಮಾಡಲು ಅಸಾಧ್ಯವೆಂದು ಅವರು ಹೇಳಿದ್ದಾರೆ.
ಗಾಝಾ ನಾಶವಾದರೆ ಮತ್ತು ಎರಡು ಮಿಲಿಯನ್ ನಾಗರಿಕರನ್ನು ನಿರಾಶ್ರಿತರನ್ನಾಗಿ ಮಾಡಿದ್ರೆ ಇದು ಹಲವು ದಶಕಗಳವರೆಗೆ ದುರಂತವನ್ನು ಸೃಷ್ಟಿಸುತ್ತದೆ ಎಂದು ಲಾವ್ರೊವ್ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಗಾಝಾಕ್ಕೆ ವಿಸ್ತರಿಸುತ್ತಿದ್ದಂತೆ ನಾಗರಿಕರಿಗೆ ನೆರವು ನೀಡಲು ಅಂತರರಾಷ್ಟ್ರೀಯ ಸಮುದಾಯವು ಮಾನವೀಯ ಒಪ್ಪಂದಕ್ಕೆ ಕರೆ ನೀಡಿದೆ. ಈ ನಡುವೆಯೇ ರಷ್ಯಾದಿಂದ ಈ ಹೇಳಿಕೆಗಳು ಹೊರ ಬಿದ್ದಿವೆ.