ಕೆಎಸ್ಸಾರ್ಟಿಸಿ ಬಸ್ ನಲ್ಲಿ ಕೋಳಿಗೆ 50 ರೂ. ಟಿಕೆಟ್ | ಸಾರಿಗೆ ಅದಾಲತ್ ಚರ್ಚೆಗೀಡಾದ ಕೋಳಿ ಪ್ರಸಂಗ - Mahanayaka
1:08 AM Wednesday 11 - December 2024

ಕೆಎಸ್ಸಾರ್ಟಿಸಿ ಬಸ್ ನಲ್ಲಿ ಕೋಳಿಗೆ 50 ರೂ. ಟಿಕೆಟ್ | ಸಾರಿಗೆ ಅದಾಲತ್ ಚರ್ಚೆಗೀಡಾದ ಕೋಳಿ ಪ್ರಸಂಗ

11/02/2021

ಮಂಗಳೂರು: ಕೆಎಸ್ಸಾರ್ಟಿಸಿ ಬಸ್ ನಲ್ಲಿ ಕೋಳಿ ಕೊಂಡು ಹೋಗಲು 50 ರೂ. ಟಿಕೆಟ್ ಪಡೆದುಕೊಳ್ಳಲಾಗುತ್ತಿದ್ದು, ಈ ವಿಚಾರ ಬುಧವಾರ ಪುತ್ತೂರಿನಲ್ಲಿ ನಡೆದ ಸಾರಿಗೆ ಅದಾಲತ್ ನಲ್ಲಿ ಚರ್ಚೆಗೀಡಾಯಿತು.

ಅಗೇಲು ಸೇವೆ(ಕರಾವಳಿಯ ದೈವರಾಧನೆಯ ಪೂಜೆ)ಗಾಗಿ ಕೋಳಿಯನ್ನು ವ್ಯಕ್ತಿಯೊಬ್ಬರು ಬಸ್ ನಲ್ಲಿ ಕೊಂಡು ಹೋಗುತ್ತಿದ್ದರು.  ಕೆಎಸ್ಸಾರ್ಟಿಸಿಯ ಕಂಡೆಕ್ಟರ್ ಕೋಳಿಯನ್ನು ಗಮನಿಸಿ ಅದಕ್ಕೆ 50 ರೂ. ಪಡೆದು ಟಿಕೆಟ್ ನೀಡಿದ್ದಾರೆ.

ಈ ವಿಚಾರವನ್ನು ಸಾರಿಗೆ ಅದಾಲತ್ ನಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಪ್ರಸ್ತಾಪಿಸಿದ್ದು,  ಇದಕ್ಕೆ ಉತ್ತರಿಸಿದ ಪುತ್ತೂರು ವಿಭಾಗೀಯ ಸಂಚಾಲನಾಧಿಕಾರಿ ಮುರಳೀಧರ್, ಸರ್ಕಾರದ ಸುತ್ತೋಲೆಯಂತೆ ಬಸ್‌ ನಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿ ಪ್ರಾಣಿ, ಪಕ್ಷಿ ಒಯ್ಯುವಂತಿಲ್ಲ ಎಂದು ಅವರು ಹೇಳಿದರು.

ಬಸ್ ನಲ್ಲಿ ಕೋಳಿಯನ್ನು ಸಾಗಿಸುವ ಕುರಿತು ವಿನಾಯಿತಿ ನೀಡಬೇಕು ಎಂದು ನಾವು ಸರ್ಕಾರಕ್ಕೆ ಪತ್ರ ಬರೆಯಬಹುದು. ನಾವು ಸುತ್ತೋಲೆಯನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮುರಳೀಧರ್ ಹೇಳಿದರು.

ಇನ್ನೂ ಸರ್ಕಾರಿ ಬಸ್ ನಲ್ಲಿ ಕೋಳಿಗಳನ್ನು ಸಾಗಿಸಲು ಕೂಡ 50 ರೂ. ನೀಡಬೇಕಾಗಿರುವುದರಿಂದ ಸಾರ್ವಜನಿಕರು ಖಾಸಗಿ ಬಸ್ ಗಳನ್ನು ಹತ್ತುತ್ತಿದ್ದಾರೆ. ಪ್ರಯೋಜನಕ್ಕೆ ಇಲ್ಲದ ಬಸ್ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಬಸ್ ನಲ್ಲಿ ಹಸು, ಕುರಿ, ಎಮ್ಮೆಯನ್ನು ಸಾಗಿಸುತ್ತಿಲ್ಲ. ಕೋಳಿಯನ್ನಷ್ಟೇ ಸಾಗಿಸುತ್ತಿದ್ದೇವೆ. ಅದು ಕೂಡ ಒಂದು, ಎರಡು ಕೋಳಿಗಳನ್ನು ಸಾಗಿಸುತ್ತಿದ್ದೇವೆ ಅಷ್ಟೆ. ಆದರೆ, ಇದಕ್ಕೆ ಒಬ್ಬ ವ್ಯಕ್ತಿಗೆ ನೀಡುವಷ್ಟೆ ಟಿಕೆಟ್ ನೀಡಬೇಕಾದರೆ, ಇದು ಯಾವ ರೀತಿಯ ನಿಯಮ? ಸರ್ಕಾರ ಕೋಳಿಗಳನ್ನು ಸಾಗಿಸಿದ್ದಕ್ಕೆ ದರ ವಿಧಿಸಲಿ, ಒಬ್ಬ ವ್ಯಕ್ತಿಗೆ ತೆಗೆಯುವ ಕಾಲು ಭಾಗದಷ್ಟು ದರವನ್ನು ವಿಧಿಸಲಿ, ಪ್ರಯಾಣಿಕರನ್ನು ಈ ರೀತಿಯಾಗಿ ಯಾಕೆ ಸುಲಿಗೆ ಮಾಡಲಾಗುತ್ತಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ