ಸಿಡಿಲು ಬಡಿದು ಮೂವರಿಗೆ ಗಂಭೀರ ಗಾಯ: ಗಾರೆ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕರು
ಚಾಮರಾಜನಗರ: ಗಾರೆ ಕೆಲಸ ಮಾಡಿ ಗ್ರಾಮಕ್ಕೆ ತೆರಳುತ್ತಿದ್ದ ಮೂವರಿಗೆ ಸಿಡಿಲು ಹೊಡೆದ ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡು ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹನೂರಿನ ತಾಲೂಕಿನ ಚಿಂಚಳ್ಳಿ ಗ್ರಾಮದಲ್ಲಿ ಜರುಗಿದೆ.
ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಗುರು ( 33) ಮಂಜು (33) ಗುರುಸ್ವಾಮಿ (44) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರು.
ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಜಮೀನೊಂದರಲ್ಲಿ ಗಾರೆ ಕೆಲಸ ಮುಗಿಸಿ ಸೋಮವಾರ ಸಂಜೆ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮಳೆ ಬಂದಿದೆ. ಈ ಸಂದರ್ಭದಲ್ಲಿ ಮಣಗಳ್ಳಿ ಸರ್ಕಾರಿ ಪ್ರೌಢಶಾಲೆ ಸಮೀಪದ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಹೊಡೆದಿದೆ.
ಇದನ್ನು ನೋಡಿದ ಸ್ಥಳೀಯರು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗುರು ಎನ್ನುವವರಿಗೆ ಕಾಲು, ಬೆರಳುಗಳಿಗೆ ಗಾಯಗಳಾಗಿದೆ. ಇನ್ನುಳಿದ ಇಬ್ಬರಿಗೆ ಶಾಕ್ ಆಗಿದ್ದು ಯಾವುದೇ ಗಂಭೀರ ಗಾಯಗಳಾಗಿಲ್ಲ, ಒಂದು ದಿನ ಚಿಕಿತ್ಸೆ ನೀಡಿದ ನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದು ಹೋಲಿ ಕ್ರಾಸ್ ವೈದ್ಯಾಧಿಕಾರಿ ಡಾ. ಭಾರ್ಗವಿ ತಿಳಿಸಿದ್ದಾರೆ.