ಇಸ್ರೇಲ್-ಹಮಾಸ್ ಯುದ್ಧ: ಗಾಝಾ ನಿರಾಶ್ರಿತರ ಶಿಬಿರದ ಮೇಲೆ ದಾಳಿ, 50 ಸಾವು, 150 ಮಂದಿಗೆ ಗಾಯ
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ಯುದ್ಧ ಪೀಡಿತ ಗಾಜಾದಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ದಾಳಿಯನ್ನು ಇಸ್ರೇಲ್ ವಾಯುಪಡೆ ನಡೆಸಿದೆ ಎಂದು ವರದಿಗಳು ಹೇಳುತ್ತಿದ್ದರೂ, ಇಸ್ರೇಲ್ ರಕ್ಷಣಾ ಪಡೆಗಳು ಇದಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಗಾಝಾದ ಆಸ್ಪತ್ರೆಯೊಂದರ ನಿರ್ದೇಶಕರು 50 ಕ್ಕೂ ಹೆಚ್ಚು ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ.
ತನ್ನ ಪಡೆಗಳು ಹಮಾಸ್ ನೊಂದಿಗೆ ನೆಲದಲ್ಲಿ ಮತ್ತು ಸುರಂಗಗಳ ಒಳಗೆ ಯುದ್ದದಲ್ಲಿ ತೊಡಗಿವೆ ಎಂದು ಇಸ್ರೇಲ್ ಸಮರ್ಥಿಸಿಕೊಂಡಿದೆ. ಹಮಾಸ್ ಬಂಡುಕೋರರು ಇಂದು ಕೂಡ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದಾರೆ ಎಂದು ಐಡಿಎಫ್ ಹೇಳಿದೆ.
ಮತ್ತೊಂದೆಡೆ ಹಮಾಸ್ ನ ಸಶಸ್ತ್ರ ವಿಭಾಗವು ಮುಂಬರುವ ದಿನಗಳಲ್ಲಿ ತಾನು ಹೊಂದಿರುವ ಕೆಲವು ವಿದೇಶಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಉದ್ದೇಶವನ್ನು ಇಂದು ಘೋಷಿಸಿತು. ಐಡಿಎಫ್ ನ ಪಡೆಗಳು ಕೇವಲ ಒಂದು ವಿಷಯದ ಮೇಲೆ ಕೇಂದ್ರೀಕರಿಸುತ್ತಿವೆ ಮತ್ತು ಅದು ಗೆಲುವು ಎಂದು ಹೇಳಿತ್ತು. ಅವರು ಹಮಾಸ್ ಅನ್ನು ನಿರ್ಮೂಲನೆ ಮಾಡಲು ಹೋರಾಡುತ್ತಿದ್ದಾರೆ ಎಂದು ಅದು ಹೇಳಿದೆ. ಸಾಧ್ಯವಾದಷ್ಟು ಶತ್ರು ಕಮಾಂಡರ್ ಗಳನ್ನು ಕೊಲ್ಲುವುದು, ಸಾಧ್ಯವಾದಷ್ಟು ಭಯೋತ್ಪಾದಕರನ್ನು ಕೊಲ್ಲುವುದು ಮತ್ತು ಅವರ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸುವುದು ಇದರ ಉದ್ದೇಶವಾಗಿದೆ ಎಂದು ಐಡಿಎಫ್ ಹೇಳಿದೆ.