ಬಡ ದಲಿತ ಮಹಿಳೆಯ ಮನೆ ಕೆಡವಲು ಯತ್ನಿಸಿದ ರಾಮನಾಥ ಭಟ್!: ಬಿರುಕು ಬಿದ್ದ ಮನೆ, ಕಣ್ಣೀರಿಡುತ್ತಿರುವ ನೊಂದ ಕುಟುಂಬ
ಬೈಂದೂರು: ತಾಲೂಕು ಶಿರೂರು ಗ್ರಾಮದ ಮೇಲ್ಪoಕ್ತಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಬಡ ದಲಿತ ಮಹಿಳೆಯ ಮನೆಯ ಬುಡಕ್ಕೆ ಜೆಸಿಬಿ ಹಾಕಿ ಮನೆಯನ್ನು ಕೆಡವಲು ಪ್ರಯತ್ನ ನಡೆಸಿದ ಘಟನೆ ನಡೆದಿದೆ.
ಮೂಲತಃ ಶಿರೂರಿನ ಮೇಲ್ಪಂಕ್ತಿ ನಿವಾಸಿಗಳಾದ ಮಂಗಳ ಕೋಂ ಲಕ್ಷ್ಮಣ ಎಂಬುವವರು ತಮ್ಮ ತಾಯಿಯವರು ಸುಮಾರು 70 ವರ್ಷಗಳಿಂದ ವಾಸ ಮಾಡಿಕೊಂಡಿರುವಂತಹ ಮನೆಯ ಪಕ್ಕದಲ್ಲಿ ಸುಮಾರು 20 ವರ್ಷಗಳ ಹಿಂದೆ ಮನೆ ಕಟ್ಟಿಕೊಂಡು ವಾಸಮಾಡಿಕೊಂಡಿದ್ದು , 94c ಅಡಿಯಲ್ಲಿ ಜಾಗದ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿರುತ್ತಾರೆ. ಕಳೆದ ಮಂಗಳವಾರ (24-10-2023)ಮನೆಗೆ ಏಕಾಏಕಿ ನುಗ್ಗಿದ ಸ್ಥಳೀಯ ನಿವಾಸಿ ರಾಮಕೃಷ್ಣ ಭಟ್ ಇವರ ಪುತ್ರನಾದ ರಾಮನಾಥ ಭಟ್ ಎಂಬಾತ ಈ ಜಾಗವು ನಮಗೆ ಸೇರಿದ್ದು ನಾಳೆ ಬೆಳಗಾಗುವುದರ ಒಳಗೆ ಮನೆ ಖಾಲಿ ಮಾಡಬೇಕೆಂದು ಹೆದರಿಸಿ ಹೋಗಿರುತ್ತಾನೆ ಮಂಗಳ ಇವರ ಮನೆಯ ಪಕ್ಕದಲ್ಲಿ ಈತ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದು ಮಂಗಳ ಹಾಗೂ ಅವರ ಪತಿ ಮನೆಯಲ್ಲಿರದ ಸಂದರ್ಭ ನೋಡಿಕೊಂಡು ಇವರ ಮನೆಯನ್ನು ಬಿಳಿಸುವ ಉದ್ದೇಶದಿಂದ ಎರಡು- ಮೂರು ಹಿಟಾಚಿ ಬಳಸಿಕೊಂಡು ಬುಧವಾರದಂದು ಏಕಾಏಕಿ ಮನೆಯ ಫೌಂಡೇಶನ್ ವರೆಗೂ ಮಣ್ಣನ್ನು ಅಗೆಯಲು ಪ್ರಾರಂಭಿಸಿದ್ದಾನೆ.
ಇದನ್ನು ಗಮನಿಸಿದ ಸ್ಥಳೀಯರು ಮಂಗಳ ಅವರಿಗೆ ವಿಷಯ ಮುಟ್ಟಿಸಿ ಅವರು ಮನೆಗೆ ಬರುವಷ್ಟರಲ್ಲಿ ಮನೆಯ ಫೌಂಡೇಶನ್ ಸಮೀಪದವರೆಗೂ ಮಣ್ಣನ್ನು ಕೊರೆದಿದ್ದು ಮನೆ ಈಗ ಸಂಪೂರ್ಣ ಬಿರುಕು ಬಿಟ್ಟಿದ್ದು ಕುಸಿಯುವ ಹಂತದಲ್ಲಿದೆ. ಸ್ಥಳೀಯರ ಮಾಹಿತಿ ಮೇರೆಗೆ ಬೈಂದೂರು ತಸಿಲ್ದಾರ್ ಶೋಭಾ ಲಕ್ಷ್ಮಿಯವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದು ಸಮಸ್ಯೆಯನ್ನು ಬಗೆಹರಿಸಿಕೊಡುವ ಭರವಸೆ ನೀಡಿ ತೆರಳಿದ್ದರು.
ಆದರೆ ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆಯ ಬಿರುಕು ಹೆಚ್ಚಾಗಿದ್ದು ಮನೆಯವರು ಇಂತಹ ಅಪಾಯಕಾರಿ ಮನೆಯಲ್ಲಿ ಮಲಗಲು ಹೆದರಿಕೊಂಡು ಮನೆಯ ಹೊರಗಡೆ ಮಕ್ಕಳೊಂದಿಗೆ ಮಳೆಯಲ್ಲಿ ರಾತ್ರಿ ಕಳೆದರು. ಇವರ ದಯನೀಯ ಸ್ಥಿತಿಯನ್ನು ತಿಳಿದು ಸೋಮವಾರ ಸ್ಥಳಕ್ಕೆ ದೌಡಾಯಿಸಿದ ದಲಿತ ಸಂಘಟನೆಗಳು ಸಂಬಂಧಪಟ್ಟ ಇಲಾಖೆಗಳಿಗೆ ಇವರ ಸಮಸ್ಯೆಯನ್ನು ಮುಟ್ಟಿಸಿ ರಾತ್ರಿ 8 ಗಂಟೆಗೆ ಬೈಂದೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜೊತೆಗೆ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ ಅವರು ತಮ್ಮ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬೀಳುವ ಹಂತದಲ್ಲಿರುವ ಮನೆಯನ್ನು ವೀಕ್ಷಿಸಿ, ತಾತ್ಕಾಲಿಕವಾಗಿ ಬಡ ಕುಟುಂಬಕ್ಕೆ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಿ ನ್ಯಾಯ ದೊರಕಿಸಿಕೊಡುವ ಭರವಸಿನ ನೀಡಿದರು. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಉದಯ ಪೂಜಾರಿ , ದಲಿತ ಮುಖಂಡರಾದ ರಾಘು ಶಿರೂರು, ಮಾದೇವ ಬಾಕಡ, ರಮೇಶ್ ಶಿರೂರು , , ಇನ್ನು ಅನೇಕ ದಲಿತ ಸಂಘಟನೆಯ ಪ್ರಮುಖರು ಹಾಜರಿದ್ದರು.
ಯಾವ ರಕ್ಷಣೆಯೂ ಇಲ್ಲದೇ, ಗಂಜಿ ಕೇಂದ್ರದಲ್ಲಿ ಮಲಗಿರುವ ನೊಂದ ಕುಟುಂಬ
ಸಂತ್ರಸ್ತೆ ಮಂಗಳ ಇವರು ಮಹಾನಾಯಕ ಜೊತೆ ಮಾತನಾಡಿ ನಮ್ಮ ಮನೆ ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ಇನ್ನು ಆ ಮನೆಯಲ್ಲಿ ವಾಸ ಮಾಡಲು ಆಗುವುದಿಲ್ಲ. ಯಾರು ನಮ್ಮ ಮನೆಯನ್ನು ಕೆಡವಿ ನಮ್ಮನ್ನ ಅಲ್ಲಿಂದ ಒಕ್ಕಲೆಬ್ಬಿಸಲು ಪ್ರಯತ್ನಿಸಿದ್ದರೋ ಅವರೇ ನಮಗೆ ಹೊಸ ಮನೆಯನ್ನು ಕಟ್ಟಿಕೊಡಬೇಕು ಇಲ್ಲವಾದಲ್ಲಿ ನಮಗೆ ಆದ ದೌರ್ಜನಕ್ಕೆ ಪ್ರತಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಕಾಯ್ದೆಯಡಿ ಮಾನ್ಯ ಬೈಂದೂರಿನ ತಹಶಿಲ್ದಾರ್ ಅವರು ರಾಮನಾಥ್ ಭಟ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಕೇಳಿಕೊಂಡರು.
ಬಿರುಕು ಬಿಟ್ಟ ಮನೆಯ ವಿಡಿಯೋ ನೋಡಿ: